ಲಕ್ಷ್ಮೀ ಹೆಬ್ಬಾಳ್ಕರ್-ಪುಷ್ಪಾ ಅಮರನಾಥ್
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೋಕ್ ನೀಡಲಾಗಿದ್ದು ಆ ಜಾಗಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಪುಷ್ಪಾ ಅಮರನಾಥ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಜಗಳಕ್ಕೆ ನಿಂತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದದ ಕೇಂದ್ರ ಬಿಂದುವಾಗಿದ್ದರು. ಆ ಸಂದರ್ಭದಲ್ಲಿ ಅವರ ಕೆಲ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ನಾಯಕರು ಮುಜುಗರ ಅನುಭವಿಸುವಂತಾಗಿತ್ತು. ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಧ್ಯಕ್ಷ ಸ್ಥಾನದಿಂದ ಕೋಕ್ ನೀಡಲಾಗಿದ್ದು ಇದು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಸಬೇಕೆಂದು ರಾಜ್ಯದ ಕೆಲ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಆದರೆ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿದ್ದ ಪುಷ್ಪಾ ಅವರಿಗೆ ಅಧ್ಯಕ್ಷೆ ಸ್ಥಾನ ಲಭಿಸಿದೆ.