ಬೆಂಗಳೂರು: ಎರಡು ದಿನದ ಹಿಂದಷ್ಟೇ ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್. ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಕಮಲಕ್ಕೆ ಶಾಕ್ ನೀಡಿದ್ದರು. ಈಗ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರೂ ಕೂಡ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.
ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದರಿಂದ ತೀವ್ರ ಬೇಸರಗೊಂಡಿರುವ ರುದ್ರೇಶ್ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ನಾಳೆ ಸುದ್ದಿಗೋಷ್ಠಿ ಕರೆದಿರುವ ರುದ್ರೇಶ್ ಅವರು, ರಾಜೀನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿದ ನಂತರ ಯಾವೊಬ್ಬ ಬಿಜೆಪಿ ಮುಖಂಡರೂ ಸಹ ರಾಮನಗರದತ್ತ ತಲೆ ಹಾಕಿಲ್ಲ, ಇಲ್ಲಿನ ಕಾರ್ಯಕರ್ತರ ಅಳಲು ಕೇಳಿಲ್ಲ. ನಮ್ಮನ್ನು ಒಂಟಿ ಮಾಡಲಾಗಿದೆ ಎಂಬುದು ರುದ್ರೇಶ್ ಅವರ ನೋವು. ಹೀಗಾಗಿ ನಾಳೆ ಸುದ್ದಿಗೋಷ್ಠಿ ನಡೆಸಿ ನಾಯಕರ ನಡೆ ಬಗ್ಗೆ ವಿವರಣೆ ನೀಡಿ, ಜಿಲ್ಲಾಧ್ಯಕ್ಷ ಸ್ಥಾನ ತ್ಯಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.