ರಾಜಕೀಯ

ಮಿನಿ ಸಮರಕ್ಕೆ ಬಿಜೆಪಿ ಸಿದ್ದ: ಜೆ.ಶಾಂತ, ರಾಘವೇಂದ್ರ, ಶ್ರೀಕಾಂತ್ ಕುಲಕರ್ಣಿಗೆ ಟಿಕೆಟ್

Shilpa D
ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ರಾಜ್ಯದ ಎರಡು ವಿಧಾನಸಭೆ ಹಾಗೂ 3 ಲೋಕಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಶ್ರೀರಾಮುಲು ಸಹೋದರಿ ಶಾಂತ, ಶಿವಮೊಗ್ಗದಿಂದ  ಬಿ.ವೈ ರಾಘವೇಂದ್ರ ಹಾಗೂ ಜಮಖಂಡಿ ಕ್ಷೇತ್ರದಿಂದ ಶ್ರೀಕಾಂತ್ ಕುಲಕರ್ಣಿ ಕಣಕ್ಕಿಳಿಯುವುದು ಫೈನಲ್ ಆಗಿದೆ, 
ನಿನ್ನೆ  ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಪೈನಲ್ ಮಾಡಲಾಗಿದೆ. ಮಂಡ್ಯ. ಲೋಕಸಭೆ ಹಾಗೂ ರಾಮನಗರ ವಿಧಾನ ಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಫೈನಲ್ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಮುಕ್ತ ಅವಕಾಶವನ್ನು ಬಿಜೆಪಿ ಶಾಸಕ ಶ್ರೀರಾಮುಲು ಅವರಿಗೆ ನೀಡಿತ್ತು, ಹೀಗಾಗಿ ತಮ್ಮ ಸಹೋದರಿ ಹಾಗೂ ಮಾಜಿ ಸಂಸದೆ ಜೆ ಶಾಂತ ಅವರನ್ನು ಕಣಕ್ಕಿಳಿಸಲು ಶ್ರೀರಾಮುಲು ನಿರ್ಧರಿಸಿದ್ದಾರೆ.
ಇನ್ನೂ  ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಬಿ.ವೈ ರಾಘವೇಂದ್ರ ಅವರ ಹೆಸರನ್ನು ಯಡಿಯೂರಪ್ಪ ಈ ಮೊದಲೇ ಘೋಷಿಸಿದ್ದರು. ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಶ್ರೀಕಾಂತ್ ಕುಲಕರ್ಣಿ ಅವರನ್ನು ಸಮಿತಿ ಫೈನಲ್ ಮಾಡಿದೆ, ಸಂಗಮೇಶ್ ನಿರಾಣಿ ರೇಸ್ ನಿಂದ ಹಿಂದೆ ಸರಿಯಲು ಒಪ್ಪಿದ್ದರಿಂದ ಕುಲಕರ್ಣಿ ಅವರಿಗೆ ಟಿಕೆಟ್ ಸಿಕ್ಕಿದೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರ ಗೆಲ್ಲಿಸುವುದಾಗಿ ಕೆ,ಎಸ್ ಈಶ್ವರಪ್ಪ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮತ್ತು ಶ್ರೀರಾಮುಲು ಹೆಗಲಿಗೆ ಬಳ್ಳಾರಿ ಹೊಣೆ ನೀಡಲಾಗಿದೆ, ಮಂಡ್ಯ ಜವಾಬ್ದಾರಿಯನ್ನು ಆರ್. ಅಶೋಕ್ ಗೆ ಹಾಗೂ ಜಮಖಂಡಿಗೆ ಜಗದೀಶ್ ಶೆಟ್ಟರ್ ಅವರನ್ನು  ನೇಮಕ ಮಾಡಲಾಗಿದ್ದು, ರಾಮನಗರದ ಹೊಣೆಯನ್ನು ಡಿ.ವಿ ಸದಾನಂದಗೌಡ ಅವರಿಗೆ ನೀಡಲಾಗಿದೆ.
SCROLL FOR NEXT