ಬಿಎಸ್'ಪಿ ಮುಖಂಡ ಎನ್. ಮಹೇಶ್
ಬೆಂಗಳೂರು: ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಎಸ್'ಪಿ ಮುಖಂಡ ಎನ್. ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಜೆಡಿಎಸ್'ಗೆ ಆಘಾತವನ್ನುಂಟು ಮಾಡಿದ್ದು, ಈ ನಡುವೆ ಮಹೇಶ್ ಅವರು ತಮ್ಮ ರಾಜಿನಾಮೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ರಾಜೀನಾಮೆಗೆ ಇಲ್ಲದ ವದಂತಿ ಹಬ್ಬಿಸುವ ಅಗತ್ಯವಿಲ್ಲ. ಈಗಾಗಲೇ ಸ್ಪಷ್ಟನೆ ನೀಡಿದ್ದೇನೆಂದು ಹೇಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸಬೇಕಾಗಿದೆ. ಅಲ್ಲದೇ, ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಬೇಕು. ಹೀಗಾಗಿ ರಾಜೀನಾಮೆ ನೀಡಲಾಗಿದೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ ಎಂದು ಪುನರುಚ್ಛರಿಸಿದ್ದಾರೆ.
ರಾಜೀನಾಮೆ ಬಳಿಕ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿಲ್ಲ. ಪಕ್ಷದ ಕಾರ್ಯಗಳು ಇರುವ ಕಾರಣ ದೇವೇಗೌಟ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಒಂದೆರೆಡು ದಿನದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ.
ಇನ್ನು ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿ ನೆಪದಲ್ಲಿ ಮಹೇಶ್ ನೀಡಿರುವ ರಾಜೀನಾಮೆಯನ್ನು ಮುಖ್ಯಂತ್ರಿ ಕುಮಾರಸ್ವಾಮಿಯವರು ಈವರೆಗೂ ಅಂಗೀಕರಿಸಿಲ್ಲ. ಇನ್ನು ಸ್ವಲ್ಪ ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದು, ಮಹೇಶ್ ಮನವೊಲಿಕೆಯ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಜಲಸಂಪನ್ಮೂಲ ಸಚಿವ ಡಿಕೆ. ಶಿವಕುಮಾರ್ ಮಾತನಾಡಿ, ಮಹೇಶ್ ಅವರು ಮತ್ತೆ ಸಂಪುಟಕ್ಕೆ ಹಿಂತಿರುಗುವ ವಿಶ್ವಾಸವಿದೆ. ಸಂಪುಟದಲ್ಲಿ ಮಹೇಶ್ ನನಗಗೆ ಅತ್ಯಂತ ಆಪ್ತರಾಗಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.