ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಧು ಬಂಗಾರಪ್ಪ ಸುದ್ದಿಗೋಷ್ಠಿ. ಚಿತ್ರ: ನಾಗರಾಜ ಗಡೇಕಲ್
ಬೆಂಗಳೂರು: ರಾಜ್ಯದಲ್ಲಿ ಯಾರಿಗೂ ಉಪ ಚುನಾವಣೆ ಬೇಕಿರಲಿಲ್ಲ, ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಉಪ ಚುನಾವಣೆ ಬಂದಿದೆ, ಐದು ಕ್ಷೇತ್ರಗಳ ಉಪ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿ, ಶಿವಮೊಗ್ಗ ಕ್ಷೇತ್ರಕ್ಕೆ ಜೆಡಿಎಸ್- ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ, ಹೀಗಾಗಿ ವಯಕ್ತಿಕ ದ್ವೇಷವನ್ನು ಬದಿಗೊತ್ತಿ ಬಿಜೆಪಿ ವಿರುದ್ಧ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕುಮಾರ ಸ್ವಾಮಿ ಕರೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರನನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಳೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.
ಉಪ ಚುನಾವಣೆ ಕುಟುಂಬ ರಾಜಕಾರಣಕ್ಕೆ ವೇದಿಕೆಯಾಗಿದೆ, ಆದರೆ ನಮ್ಮ ಕುಟುಂಬದತ್ತ ಬೆರಳು ಮಾಡಿ ತೋರಿಸಲಾಗುತ್ತದೆ, ಆದರೆ ಈ ಚುನಾವಣೆಯಿಂದ ನಾನು ತಪ್ಪಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ನಂತರ ಕೆಲ ದಿನಗಳ ಕಾಲ ಬೇಸರವಾಗಿತ್ತು, ಆದರೆ ನನ್ನ ತಂದೆಯೇ ಚುನಾವಣೆಯಲ್ಲಿ ಸೋತಿದ್ದರು, ಅದನ್ನೆಲ್ಲವನ್ನು ನಾವು ನುಂಗಿದ್ದೇವೆ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ.