ರಾಜಕೀಯ

ಉಪ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನಂತಕುಮಾರ್ ಹೆಗಡೆಗೆ ಸ್ಥಾನವಿಲ್ಲ

Lingaraj Badiger
ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಗುರುವಾರ 38 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಫೈರ್ ಬ್ರಾಂಡ್ ಖ್ಯಾತಿಯ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪ್ರಚಾರಕ್ಕೆ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನಂತಕುಮಾರ್ ಹೆಗಡೆಗೆ ಅವಕಾಶ ಕಲ್ಪಿಸಿದರೆ ಅವರ ಮಾತುಗಳಿಂದ ಪಕ್ಷಕ್ಕೆ ಹಾನಿ ಆಗಬಹುದೆಂಬ ಕಾರಣದಿಂದ ಅವರನ್ನು ದೂರವಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂದು ಚುನಾವಣಾ ಆಯೋಗಕ್ಕೆ ಬಿಜೆಪಿ ನೀಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಇದ್ದಾರೆ. 
ನವೆಂಬರ್ 3ರಂದು ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ವರ್ಗದ ಮತಗಳು ಹೆಚ್ಚಿವೆ. ಒಂದು ವೇಳೆ ಅನಂತ್ ಕುಮಾರ್ ಹೆಗಡೆ ಅವರು ಪ್ರಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅವರನ್ನು ಹೊರಗಿಡಲಾಗಿದೆ ಎನ್ನಲಾಗಿದೆ.
SCROLL FOR NEXT