ರಾಜಕೀಯ

ಉಗ್ರಪ್ಪ ಮೇಲಿನ ಕೋಪ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಎಂ ಪ್ರಚಾರ ಮಾಡೋದು ಡೌಟ್?

Shilpa D
ಬೆಂಗಳೂರು:  ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ಘಟಾನುಘಟಿ ನಾಯಕರಗೆಲ್ಲಾ ಫೀಲ್ಡ್ ಗಿಳಿದು ಮತಯಾಚನೆ ಮಾಡುತ್ತಿದ್ದಾರೆ.. ಆದರೆ ಭಾನುವಾರದಿಂದ ಪ್ರಚಾರ ಆರಂಭಿಸಲಿರುವ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಮಾತ್ರ ಕ್ಯಾಂಪೇನ್ ಮಾಡಲಿದ್ದಾರೆ.
ಮಂಡ್ಯ ಮತ್ತು ಶಿವಮೊಗ್ಗಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಾದ ಎಲ್ ಆರ್ ಶಿವರಾಮೇಗೌಡ ಮತ್ತು ಮಧು ಬಂಗಾರಪ್ಪ ಪರ ಸಿಎಂ ಕ್ಯಾಂಪೇನ್ ಆರಂಭಿಸಲಿದ್ದಾರೆ. ಭಾನುವಾರ ಬೆಳಗ್ಗೆ 10.45ಕ್ಕೆ ಶಿವಮೊಗ್ಗಕ್ಕೆ ಸಿಎಂ ಆಗಮಿಸಲಿದ್ದಾರೆ,  ಶಿವಮೊಗ್ಗದ 8 ಸ್ಥಳಗಳಲ್ಲಿ ನಡೆಯುವ ರ್ಯಾಲಿಗಳಲ್ಲಿ ಸಿಎಂ ಭಾಗವಹಿಸಿಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೋಳ್ಳುವ ಸಿಎಂ ಬುಧವಾರ ಅಲ್ಲಿಂದ ಹೊರಡುವುದಕ್ಕೂ ಮುನ್ನ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ, ನಂತರ ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ನಡೆಸುವುದು ಅನುಮಾನವಾಗಿದೆ. 
ಮಂಡ್ಯ ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ದಿನ ನಿಗದಿಪಡಿಸಿರುವ ಸಿಎಂ ಬಳ್ಳಾರಿ, ಜಮಖಂಡಿಗೆ ದಿನ ನಿಗದಿಪಡಿಸಿಲ್ಲ. ನ.1ರಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಶನಿವಾರವೂ ಮಂಡ್ಯದಲ್ಲಿ ಪ್ರಚಾರ ನಡೆಸಲಿರುವ ಸಿಎಂ ಅ.28 ರಿಂದ 31 ರವರೆಗೆ ಶಿವಮೊಗ್ಗದಲ್ಲಿರಲಿದ್ದಾರೆ. 
ಬಳ್ಳಾರಿ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಈ ಹಿಂದೆ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.
ಆದರೆ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
SCROLL FOR NEXT