ರಾಜಕೀಯ

ಸ್ಥಳೀಯ ಸಂಸ್ಥೆ ಚುನಾವಣೆ: ದೋಸ್ತಿ ಸರ್ಕಾರದ ಪರ ತೀರ್ಪು ಎಂದ ಸಿಎಂ

Lingaraj Badiger
ಬೆಂಗಳೂರು: ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪರವಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ. 
ಇಂದು ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದ  ಜನ ಕಾಂಗ್ರೆಸ್ - ಜೆಡಿಎಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಫಲಿತಾಂಶ ಸಮ್ಮಿಶ್ರ ಸರ್ಕಾರದ ಬಗ್ಗೆ ಜನ ಒಲವು ಹೊಂದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
ನಾವು ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿಲ್ಲ. ನಮ್ಮ ಅಭ್ಯರ್ಥಿಗಳಿಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಬಗ್ಗೆ ನಗರ ಪ್ರದೇಶಗಳಲ್ಲಿ ಒಲವು ಕಡಿಮೆಯಾಗುತ್ತಿದೆ. ನಗರದಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಆದರೆ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ಸಿಎಂ ಎಚ್ ಡಿ ಕೆ ತಿಳಿಸಿದ್ದಾರೆ.
ಮತದಾರರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ನಂಬಿಕೆಯಿದೆ, ಭರವಸೆ ಇದೆ, ಹೀಗಾಗಿ ಗೆಲುವು ಸಾಧ್ಯವಾಗಿದೆ. ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸರ್ಕಾರದ ಬಗ್ಗೆ ಜನರಲ್ಲಿ, ಅಧಿಕಾರಿಗಳಿಗೆ ತಪ್ಪು ಕಲ್ಪನೆ ಮೂಡಿಸಿ ಅವರಲ್ಲಿ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಹೇಗೆ ನಡೆಸಬೇಕು ಎಂದು ನಮಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 
ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಸರ್ಕಾರದ ಖರ್ಚು ವೆಚ್ಚ ಬಗ್ಗೆ ಶ್ವೇತ ಪತ್ರ ಬೇಡ, ಬೇಕಾದರೆ ಎಲ್ಲವನ್ನೂ ಕೇಸರಿ ಪತ್ರದಲ್ಲಿ ಬರೆದು ಕೊಡುತ್ತೇನೆ ಎಂದರು.
SCROLL FOR NEXT