ರಾಜಕೀಯ

ಮೈತ್ರಿ ಕಷ್ಟವಾದರೆ ಸ್ಪಷ್ಟವಾಗಿ ಹೇಳಿಬಿಡಿ, ಸಹಕಾರಕ್ಕಾಗಿ ಬಿಜೆಪಿ ಕಾಯುತ್ತಿದೆ: ಎಚ್ ಡಿ ದೇವೇಗೌಡ

Srinivasamurthy VN
ನವದೆಹಲಿ: ಬೆಳಗಾವಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ರಾಜಕೀಯ ಬಿಕ್ಕಟ್ಟನ್ನು ತಮ್ಮ ರಾಜಕೀಯಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಸರ್ಕಾರ ಉರುಳಿಸುವ ಕುರಿತು ಷಡ್ಯಂತ್ರ ರೂಪಿಸಿದೆ ಎಂಬ ಆರೋಪ ಕೇಳಿ ಬರುತ್ತಿರುವಂತೆಯೇ ಇತ್ತ ಕಾಂಗ್ರೆಸ್ ಮುಖಂಡರಿಗೆ ಜೆಡಿಎಸ್ ವರಿಷ್ಟ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 
ಮಾಧ್ಯಮವೊಂದು ವರದಿ ಮಾಡಿರುವಂತೆ, 'ರಾಜ್ಯ ಕಾಂಗ್ರೆಸ್ ನ ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತಿರುವ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ಕಾಂಗ್ರೆಸ್​ ಹೈಕಮಾಂಡ್​ ವಿರುದ್ದ ಗರಂ ಆಗಿದ್ದಾರೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಅವರೊಂದಿಗೆ ಮಾತನಾಡಿರುವ ದೇವೇಗೌಡ ಅವರು 'ಸರ್ಕಾರ ಸಮಸ್ಯೆ ಇಲ್ಲದೆ ನಡೆಯುವುದಾದರೆ ಮಾತ್ರ ಆಡಳಿತ ನಡೆಸೋಣ. ನಿಮಗೆ ಮೈತ್ರಿಯನ್ನು ನಿಭಾಯಿಸುವುದು ಕಷ್ಟವಾಗಿದ್ದರೆ ಸ್ಪಷ್ಟವಾಗಿ ಹೇಳಿಬಿಡಿ. ಮೈತ್ರಿ ಸಾಧ್ಯವಿಲ್ಲವಾದರೆ ಅವರವರ ದಾರಿ ಅವರವರದ್ದು. ಜತೆಗೆ ನಮ್ಮ ಸಹಕಾರಕ್ಕಾಗಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎಂದು ಗೌಡರು ಹೇಳಿದ್ದಾರೆ ಎನ್ನಲಾಗಿದೆ.
ಆ ಮೂಲಕ ತಾವು ಯಾವುದೇ ನಿರ್ಧಾರಕ್ಕೂ ಸ್ವತಂತ್ರರು ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ದೇವೇಗೌಡರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಗೌಡರ ಅಸಮಾಧಾನ ಹೊರಬಿದ್ದ ಬೆನ್ನಲ್ಲೇ ತಕ್ಷಣ ಎಚ್ಚೆತ್ತುಕೊಂಡ ವೇಣುಗೋಪಾಲ್​ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರಿಗೆ ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೂ ತೆರೆ ಎಳೆಯಿರಿ ಎಂದು ಖಡಕ್​ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್​ ಅವರು ಗುರುವಾರ ಬೆಳಗ್ಗೆ ದೇವೇಗೌಡ ನಿವಾಸಕ್ಕೆ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
SCROLL FOR NEXT