ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವಸ್ಥಾನ ಸಿಗದಿದ್ದಕ್ಕೆ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಎದುರಾಗಬಹುದಾದ ಭಿನ್ನಮತದ ಕಾರಣದಿಂದಾಗಿ ಕಾಂಗ್ರೆಸ್ ಸಂಪುಟ ವಿಸ್ತರಣೆಯನ್ನು ಮುಂದೂಡಿದೆ.
ವಿಧಾನ ಪರಿಷತ್ ಚುನಾವಣೆ ನಂತರ ಅಂದರೇ ಅಕ್ಟೋಬರ್ 3 ರ ನಂತರ ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ನಡೆಯಬಹುದು , ಆದರೆ ಈ ಮೊದಲು ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕೆ.ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಹೇಳಿದ್ದರು. ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದೆವು. ಆದರೆ ಪರಿಷತ್ ಚುನಾವಣೆ ಇರುವುದರಿಂದ ಅಕ್ಟೋಬರ್ 3 ರ ನಂತರ ಯಾವ ಸಮಯದಲ್ಲಾದೂ ಸಂಪುಟ ವಿಸ್ತರಣೆ ಆಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಪಕ್ಷದಲ್ಲಿ ಯಾವುದೇ ಭಿನ್ನಮತ ಗೊಂದಲಗಳಿಲ್ಲ, ನಾನು ಯುರೋಪ್ ಪ್ರವಾಸ ಮುಗಿಸಿ ಬಂದ ನಂತರ ಮಾತನಾಡಿದ ಅವರು ನಾನು ನಮ್ಮ ಎಲ್ಲಾ ಶಾಸಕರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ -ಜೆಡಿಎಸ್ ನೇತೃಕತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಏನೋ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯಗಳಿರುತ್ತವೆ. ಅವುಗಳನ್ನೆಲ್ಲಾ ಶಮನಮಗೊಳಿಸಲಾಗಿದೆ ಎಂದು ಹೇಳಿದ್ದಾರೆ..
ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಲವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ಸತ್ಯ. ಆದರೆ ಜಾರಕಿಹೊಳಿ ಸಹೋದರರು ಸೇರಿದಂತೆ ಯಾರೂ ಪಕ್ಷ ಬಿಡುವುದಿಲ್ಲ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದರು.
ಇದೇ ವೇಳೆ ಪ್ರತಿ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಲಜ್ಜೆಗೆಟ್ಟ ಬಿಜೆಪಿ ಮಾನಾಮರ್ಯಾದೆ ಬಿಟ್ಟು ಅಧಿಕಾರ ದಾಹ ದಿಂದ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಹಲವರನ್ನು ಬಿಜೆಪಿ ಸಂಪರ್ಕಿಸಿರುವುದು ಬಹಿರಂಗವಾಗಿದೆ. ಬಿಜೆಪಿ ಸರ್ಕಾರ ಬೀಳಿಸಲು ಯತ್ನಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.
ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಸರ್ಕಾರ ಸುಭದ್ರವಾಗಿದೆ ಎಂದು ಮಾಜಿ ಸಿಎಂ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos