ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿರ ಪರಿಸ್ಥಿತಿಯಲ್ಲಿರುವಂತಹ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ರಾಜ್ಯ ಬಿಜೆಪಿ ಸದಸ್ಯರ ವಿಶೇಷ ಸಭೆ ಕರೆದಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್, ಕೇಂದ್ರ ಸಚಿವ ಸದಾನಂದ ಗೌಡ, ರಮೇಶ್ ಜಿಗಜಿಣಗಿ ಮತ್ತು ಅನಂತ್ ಕುಮಾರ್ ಭಾಗವಹಿಸಲಿದ್ದಾರೆ.
ಕಳೆದ ತಿಂಗಳು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮುಂದುವರಿದ ಭಾಗದ ಸಭೆ ಇಂದು ಆಗಿದೆ ಎಂದು ಪಕ್ಷ ಹೇಳುತ್ತಿದ್ದರೂ ಕೂಡ ರಾಜ್ಯ ಸರ್ಕಾರದ ಎರಡೂ ಪಕ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಕೆಲ ಬಿಜೆಪಿ ಶಾಸಕರು ಪಕ್ಷ ತೊರೆದು ಹೋಗಬಹುದು ಎಂಬ ಅನುಮಾನಗಳಿರುವುದರಿಂದ ಇಂದಿನ ಸಭೆಯಲ್ಲಿ ಈ ಎಲ್ಲಾ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಈ ಬಗ್ಗೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಸಿ ಟಿ ರವಿ, ಮುಂಬರುವ ಲೋಕಸಭೆ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕೆಂದು ನಾವು ಚರ್ಚೆ ನಡೆಸಲಿದ್ದೇವೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆ ಸಮಯದಲ್ಲಿ ಮಾಡುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೂಡ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.