ಹಾಸನ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಸರ್ಕಾರ ಅಸ್ಥಿರಗೊಳಿಸುವ ಯತ್ನ ಮುಂದುವರೆಸಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನತೆಗೆ ನಾನೇ ಕರೆ ನೀಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮುಂದುವರೆಸಿದರೆ ನಾನೇ ರಾಜ್ಯದ ಜನರಿಗೆ ಕರೆಕೊಟ್ಟು ದಂಗೆ ಏಳಿಸುತ್ತೇನೆ ಎಂದರು.
ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸಿಎಂ ಆಗಲು ಬಿಡದಿದ್ದಾಗ ಜನರು ದಂಗೆ ಎದ್ದಿದ್ದರು. ಈಗ ಆ ಇತಿಹಾಸ ಮತ್ತೆ ಮರುಕಳಿಸುತ್ತದೆ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ನಾನೇ ಹೇಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಅವರು ರಿಯಲ್ ಎಸ್ಟೇಟ್ ಕಿಂಗ್ ಪಿನ್ ಗಳ ಜೊತೆ ಸೇರಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಆದರೂ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.
20 ಶಾಸಕರನ್ನು ಮುಂಬೈಗೆ ಕರೆದೊಯ್ಯಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನೇ ಶಾಸಕರನ್ನು ಮುಂಬೈಗೆ ಕಳುಹಿಸಿದ್ದೇನೆ. ಯಡಿಯೂರಪ್ಪಗೆ ಏನೂ ಆಗದಂತೆ ಕರೆದುಕೊಂಡು ಹೋಗಿ ಅಂತಾ ಹೇಳಿ ಕಳುಹಿಸಿದ್ದೇನೆ. ಯಡಿಯೂರಪ್ಪರ ಆಸೆ ಮುಂದುವರಿಯಲಿ ಎಂದು ವ್ಯಂಗ್ಯವಾಡಿದರು.
ಬಂಧನ ಭೀತಿಯಿಂದ ಯಡಿಯೂರಪ್ಪ ಅವರ ಶಿಷ್ಯ ಶ್ರೀಲಂಕಾಗೆ ಕದ್ದುಹೋಗಿದ್ದಾನೆ. ಈ ರೌಡಿಗಳನ್ನೆಲ್ಲಾ ನಾನು ಸುಮ್ಮನೆ ಬಿಡಲ್ಲಾ ಕಾನೂನು ಕ್ರಮ ಜರುಗಿಸುವೆ. ಯಡಿಯೂರಪ್ಪ ಜೊತೆ ರೌಡಿಗಳು ಹವಾಲಾ ಹಣ ಹಂಚುತ್ತಿದ್ದಾರೆ. ಪುಡಿ ರೌಡಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics