ರಾಜಕೀಯ

ಸಿಎಂ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸುವಂತೆ ಬಿಜೆಪಿ ಆಗ್ರಹ

Manjula VN
ಬೆಂಗಳೂರು: ದಂಗೆ ಏಳಬೇಕೆಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಯಿಂದ ಕ್ರುದ್ಧರಾಗಿರುವ ಬಿಜೆಪಿ ನಾಯಕರು, ಅವರ ವಿರುದ್ಧ ರಾಜದ್ರೋಹ ಆರೋಪದಡಿ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ. 
ಅಲ್ಲದೆ. ಕುಮಾರಸ್ವಾಮಿಯವರ ವಿರುದ್ಧ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಶುಕ್ರವಾರ ಭೇಟಿ ಮಾಡಿ ದೂರು ನೀಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಿನ್ನೆಯಷ್ಟೇ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥೆಯ ವಿರುದ್ಧ ನಕ್ಸಲರು ಮಾತ್ರ ದಂಗೆಗೆ ಕರೆ ನೀಡುತ್ತಿದ್ದರು. ಇದೀಗ ಸಂವಿಧಾನ ಬದ್ಧ ಸ್ಥಾನದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ದಂಗೆಗೆ ಕರೆ ನೀಡಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 
ಮುಖ್ಯಮಂತ್ರಿ ಹೇಳಿಕೆಯು ಐಸಿಸಿ 124(ಎ) ಪರಿಚ್ಛೇದದಡಿ ರಾಜದ್ರೋಹವಾಗುತ್ತದೆ ಎಂದು ಅಶೋಕ್ ಕಿಡಿಕಾರಿದರು. 
ಹಾಸನದಲ್ಲಿ ಬೆಳಿಗ್ಗೆ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರ ಮನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನುಗ್ಗಿದ್ದರು. ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸವಾಗಿದೆ. ಆದರೆ, ಮುಖ್ಯಮಂತ್ರಿಗಳೇ ಪ್ರಚೋದನಾತ್ಮಕ ಹೇಳಿಕೆ ನೀಡಿದರೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ. ವಿರೋಧ ಪಕ್ಷಗಳ ನಾಯಕರ ನಿವಾಸಕ್ಕೆ ಕಾರ್ಯಕರ್ತರು ದಾಳಿ ಘಟನೆಯಿಂದ ಪೊಲೀಸ್ ವ್ಯವಸ್ಥೆ ಸತ್ತಿದೆಯೇ, ಬದುಕಿದೆಯೇ ಎನ್ನುವಂತಾಗಿದೆ ಎಂದು ಕಿಡಿಕಾರಿದರು. 
SCROLL FOR NEXT