ಸಚಿವ ಸಂಪುಟ ವಿಸ್ತರಣೆ: ಕಾಂಗ್ರೆಸ್ ಗೆ ಮತ್ತೊಂದು ಸುತ್ತಿನ ತಲೆನೋವು; ಬಂಡಾಯ ಶಾಸಕರಿಗೆ ಬಂಪರ್ ಚಾನ್ಸ್!
ಬೆಂಗಳೂರು: ಕರ್ನಾಟಕ ಸರ್ಕಾರ ಸಚಿವ ಸಂಪುಟ ವಿಸ್ತರಣೆಗೆ ಸಜ್ಜುಗೊಂಡಿದೆ. ಇತ್ತ ಕಾಂಗ್ರೆಸ್ ಸಹ ಮತ್ತೊಂದು ಸುತ್ತಿನ ತಲೆ ಬಿಸಿ ಎದುರಿಸಲು ಸಿದ್ಧಗೊಂಡಿದೆ.
ಸಚಿವ ಸಂಪುಟಕ್ಕೆ 6 ಹೊಸ ಸಚಿವರ ಸೇರ್ಪಡೆಯಾಗಲಿದ್ದು, ಈಗಾಗಲೇ ಬಂಡಾಯ, ಭಿನ್ನಮತ, ಗುಂಪುಗಾರಿಕೆಯಿಂದ ಜರ್ಜರಿತಗೊಂಡಿರುವ ಕಾಂಗ್ರೆಸ್ ಪಕ್ಷ ತನ್ನ ಪಕ್ಷದಿಂದ ಸಚಿವ ಸಂಪುಟಕ್ಕೆ ಆಯ್ಕೆ ಮಾಡುವ ಶಾಸಕರ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಸಾಮಾನ್ಯವಾಗಿ ಸಚಿವ ಸಂಪುಟ ವಿಸ್ತರಣೆಗೆ ಶಾಸಕರನ್ನು ಆಯ್ಕೆ ಮಾಡುವ ಸೂತ್ರಗಳಿಗಿಂತಲೂ ಈ ಬಾರಿ ಕಾಂಗ್ರೆಸ್ ಭಿನ್ನವಾಗಿ ಯೋಚನೆ ಮಾಡುತ್ತಿದ್ದು, ಭಿನ್ನಮತೀಯರಿಗೆ ಚಾನ್ಸ್ ನೀಡಲು ಚಿಂತನೆ ನಡೆಸುತ್ತಿದೆ.
ಕಾಂಗ್ರೆಸ್ ಗೆ ಇನ್ನೂ 6 ಸಚಿವರನ್ನು ನೇಮಕ ಮಾಡಿ 20 ನಿಗಮ ಮಂಡಳಿಗಳಿಗೆ ಆಗುವಷ್ಟು ಸ್ಥಾನಗಳಿದ್ದು, ಇದನ್ನು ಬಂಡಾಯ ಶಮನಕ್ಕೆ ಸೂಕ್ತವಾಗಿ ಉಪಯೋಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಯೋಜನೆ ಸಿದ್ಧಪಡಿಸಿದೆ. ಕಾಂಗ್ರೆಸ್ ನ ಈ ನಡೆ ಶಾಸಕರಾದ ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಮುಂದಾತ ಭಿನ್ನಮತೀಯ ಶಾಸಕರಿಗೆ ಸಿಹಿ ಸುದ್ದಿಯಂತಾಗಿದೆ.
ಎಲ್ಲರನ್ನೂ ಸಂತುಷ್ಟಗೊಳಿಸುವುದು ಅಸಾಧ್ಯ, ಆದರೆ ಪ್ರಭಾವಿಗಳನ್ನು ಅತೃಪ್ತರಾಗದಂತೆ ತಡೆಯುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics