ರಾಜಕೀಯ

ಮೈತ್ರಿ ಸರ್ಕಾರಕ್ಕೆ ಯಾವ ಬೆದರಿಕೆಯೂ ಇಲ್ಲ, ಕುಮಾರಸ್ವಾಮಿಯವರೇ ದಸರಾ ಉದ್ಘಾಟಿಸುವರು: ಜಿಟಿ ದೇವೇಗೌಡ

Manjula VN
ಮೈಸೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ಬೆದರಿಕೆಗಳೂ ಇಲ್ಲ. ಈ ಬಾರಿಯ ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೇ ಚಾಲನೆ ನೀಡಲಿದ್ದಾರೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳು ಸ್ಥಿರವಾಗಿರುವ ಮೈತ್ರಿ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಬಿಜೆಪಿ ವಿರುದ್ಧ ದಂಗೆ ಏಳುವ ಕುರಿತು ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ರಾಜ್ಯ ಪ್ರವಾಹ ಹಾಗೂ ಬರ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನಗಳನ್ನು ನಡೆಸುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಬಿಜೆಪಿ ಶಾಸಕರಿಗೆ ಜೆಡಿಎಸ್ ನಾಯಕರು ಆಮಿಷವೊಡ್ಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಶಾಸಕರಾದ ರಾಮ್'ದಾಸ್, ನಾಗೇಂದ್ರ ಹಾಗೂ ಹರ್ಷವರ್ಧನ್ ಅವರು ನನ್ನ ಜೊತೆಗಿದ್ದಾರೆ. ಹಾಗೆಂದು ಅವರನ್ನು ನಾನು ನಮ್ಮ ಪಕ್ಷಕ್ಕೆ ಕರೆಯಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. 
ಬಳಿಕ ಮೈಸೂರು ನಗರ ಪಾಲಿಕೆ ಹಾಗೂ ಜಿಲ್ಲ ಪಂಚಾಯತ್ ನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಪಕ್ಷದ ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. 
ಬಳಿಕ ದಸರಾ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದ ಅವರು, ದಸರಾ ಹಬ್ಬಕ್ಕಾಗಿ ರೂ.25 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಇದರಲ್ಲಿ ರಸ್ತೆ ಕಾಮಗಾರಿಗಾಗಿ ಈಗಾಗಲೇ ರೂ.2.16 ಕೋಟಿ ಬಿಡುಗಡೆಯಾಗಿದೆ. ದಸರಾ ಸಿದ್ಧತೆಗಳ ಕುರಿತಂತೆ ರಾಜಮನೆತನಕ್ಕೆ ಶೀಘ್ರದಲ್ಲಿಯೇ ಪಟ್ಟಿಯನ್ನು ಕಳುಹಿಸಿಕೊಡಲಾಗುತ್ತದೆ. ದಸರಾ ಉಪ ಸಮಿತಿಗಳಿಗೆ ಅಧಿಕಾರಿಗಳಲ್ಲದವರನ್ನು ಸೆ.25ರೊಳಗಾಗಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT