ಸಿಎಸ್ ಶಿವಳ್ಳಿ - ಪತ್ನಿ ಕುಸುಮಾ
ಬೆಂಗಳೂರು: ಇತಿಹಾಸ ಪ್ರಸಿದ್ಧ ಬ್ರಹ್ಮಪುರ ಕ್ಷೇತ್ರ ಕುಂದಗೋಳ. ಸಂಗೀತ ಕ್ಷೇತ್ರದಲ್ಲೀಗ ಚುನಾವಣೆಯ ನಾದ ಕಾವೇರುತ್ತಿದೆ. ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್ ತೀವ್ರಗೊಂಡಿದ್ದು, ಸುಮಾರು 15 ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ.
ಶಿವಳ್ಳಿ ಪತ್ನಿ ಕುಸುಮಾ ಸೇರಿದಂತೆ ಟಿಕೆಟ್ ಆಕಾಂಕ್ಷಿತರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ಮುಖಂಡರ ಬಳಿ ಲಾಬಿ ನಡೆಸಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಮೈತ್ರಿ ಪಕ್ಷ ಕಾಂಗ್ರೆಸನ್ನು ಬೆಂಬಲಿಸುವುದಾಗಿ ದೇವೇಗೌಡರು ಈಗಾಗಲೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಕುಸುಮ ಶಿವಳ್ಳಿ - ಸಚಿವ ಸಿ.ಎಸ್.ಶಿವಳ್ಳಿ ಅವರ ಪತ್ನಿ
ಷಣ್ಮುಖಪ್ಪ ಶಿವಳ್ಳಿ - ಸಿ.ಎಸ್.ಶಿವಳ್ಳಿ ಸಹೋದರ, ಉದ್ಯೋಗಿ
ಶಿವಾನಂದ ಬೆಂತೂರ - (ಬಿಜೆಪಿ ತೆಕ್ಕೆಯಲ್ಲಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಅನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಗದ್ದುಗೆಗೇರುವಂತೆ ಮಾಡಿದವರಲ್ಲಿ ಶಿವಾನಂದ ಬೆಂತೂರ ಪ್ರಮುಖರು)
ವಿಜಯಲಕ್ಷ್ಮೀ ಪಾಟೀಲ - ಜಿ.ಪಂ.ಅಧ್ಯಕ್ಷೆ
ಸುರೇಶ್ ಸವಣೂರು - (ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮನ್ವಯಾಧಿಕಾರಿ ಹಾಗೂ 2004 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು )
ಸುರೇಶ್ ಗೌಡ ಪಾಟೀಲ್ - ಜಿ.ಪಂ.ಸದಸ್ಯ
ಜಗನ್ನಾಥಗೌಡ ಸಿದ್ದನಗೌಡ - ಎಪಿಎಂಸಿ ಅಧ್ಯಕ್ಷ
ಹೆಚ್.ಎಲ್.ನದಾಫ್ - ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡ, ವಕೀಲ
ಇವರೊಂದಿಗ ಮಾಜಿ ಶಾಸಕರ ಪುತ್ರರಾದ ಚಂದ್ರಶೇಖರ್ ಜುಟ್ಟಲ್, ವಿಶ್ವನಾಥ ಕೂಬಿಹಾಳ, ಅನ್ನದಾನಪ್ಪ ಉಪ್ಪಿನ ಸಹ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
2019-20 ಜಾತಿವಾರು ಲೆಕ್ಕಾಚಾರ
ರಡ್ಡೆರ, ಗಂಗಾಮತ,ಅರಕಸಾಲಿ, ಹಡಪದ, ಅಗಸರು, ಜೈನರು ಸೇರಿ ಇತರೆ: 7900
ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಮತಗಳೇ ನಿರ್ಣಾಯಕವಾಗಿದ್ದರೂ ಸಹ ಅಲ್ಪಸಂಖ್ಯಾತ ಮತಗಳು ಚುನಾವಣೆಯಲ್ಲಿ ಪ್ರಮುಖವಾಗಿವೆ.
ಕಳೆದ ಬಾರಿ ಕುರುಬ ಸಮುದಾಯದಿಂದ ಸ್ಪರ್ಧಿಸಿದ್ದ ಚನ್ನಬಸಪ್ಪ ಎಸ್.ಶಿವಳ್ಳಿ ಗೆಲುವು ಸಾಧಿಸುವಂತಾಗಿತ್ತು. ಬಿಜೆಪಿ ಕ್ಷೇತ್ರದಿಂದ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದರಿಂದ ಲಿಂಗಾಯತ ಮತಗಳಿಗೆ ಸರಿಸಮಾನವಾಗಿರುವ ಕುರುಬ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಈ ಬಾರಿಯೂ ಕುರುಬ ಅಭ್ಯರ್ಥಿಯನ್ನೇ ಚುನಾವಣೆಗೆ ನಿಲ್ಲಿಸಲು ಚಿಂತನೆ ನಡೆಸಿದೆ. ಹೀಗಾಗಿ ಶಿವಳ್ಳಿ ಪತ್ನಿ ಕುಸುಮಾ ಅವರಿಗೆ ಟಿಕೇಟ್ ನೀಡಬೇಕು ಎಂದು ಶಿವಳ್ಳಿ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಕುಸುಮಾ ಅವರಿಗೆ ಟಿಕೇಟ್ ಸಾಧ್ಯವಾಗದೇ ಇದ್ದಲ್ಲಿ ತಮಗೆ ಬಿ.ಫಾರಂ ನೀಡಬೇಕೆಂದು ಶಿವಳ್ಳಿ ಸಹೋದರ ಷಣ್ಮುಖಪ್ಪ ಕೆಪಿಸಿಸಿ ಮೆಟ್ಟಿಲೇರಿದ್ದಾರೆ.
ಕುಸುಮಾ ಶಿವಳ್ಳಿ ಅವರಿಗೆ ಅನುಕಂಪದ ಅಲೆ ಇದೆ ಎನ್ನುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇವರ ವಿರುದ್ಧದ ಕೂಗುಗಳು ಕೇಳಿಬಂದಿವೆ. ರಾಜಕೀಯ ಜ್ಞಾನವಿಲ್ಲದ ಕುಸುಮಾ ಅವರಿಗೆ ಟಿಕೆಟ್ ನೀಡಬಾರದೆಂದು ಇತರೆ ಆಕಾಂಕ್ಷಿಗಳು ಪಕ್ಷದ ನಾಯಕರ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಸಚಿವ ಧಾರವಾಡ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ, ಪರಿಷತ್ ಸದಸ್ಯ ಶ‍್ರೀನಿವಾಸ ಮಾನೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್, ತಾಲೂಕು ಅಧ್ಯಕ್ಷ ಜಗದೀಶ ಉಪ್ಪಿನ, ಉಸ್ತುವಾರಿ ಸುದರ್ಶನ್ ಪಾಲ್ಗೊಂಡಿದ್ದರು.
ಸಭೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಾಗಿದ್ದು, ಹೈಕಮಾಂಡ್ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚರ್ಚಿಸಲಿದ್ದಾರೆ.
ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಉಪಚುನಾವಣೆ ಸಂಬಂಧ ಚರ್ಚೆ ನಡೆಸಲಾಗಿದ್ದು, ಆಕಾಂಕ್ಷಿಗಳ ಪಟ್ಟಿ ಪಡೆಯಲಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಆಕಾಂಕ್ಷಿಗಳಲ್ಲಿ ಯಾರು ಪ್ರಬಲರು ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದು, ಶುಕ್ರವಾರದೊಳಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗುವುದು ಎಂದರು.
ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅಲ್ಪಸಂಖ್ಯಾತ ಸಮುದಾಯದ ಟಿಕೆಟ್ ಆಕಾಂಕ್ಷಿ ಎಚ್.ಎಲ್.ನದಾಫ್ ಮಾತನಾಡಿ, ಕಳೆದ 70 ವರ್ಷಗಳಿಂದಲೂ ಕ್ಷೇತ್ರದಿಂದ ಯಾರೊಬ್ಬರ ಅಲ್ಪಸಂಖ್ಯಾತರಿಗೂ ಟಿಕೆಟ್ ನೀಡಿಲ್ಲ. ಲೋಕಸಭೆ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗಳಿಗೆ ಧಾರವಾಡದಿಂದ ಟಿಕೆಟ್ ಕೇಳಲಾಗಿತ್ತಾದರೂ ಪಕ್ಷ ನೀಡಿಲ್ಲ. ಹೀಗಾಗಿ ಕುಂದಗೋಳ ಕ್ಷೇತ್ರದಿಂದ ಮುಸ್ಲಿಂ ಸಮುದಾಯದ ಆಕಾಂಕ್ಷಿಯಾಗಿರುವ ತಮಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಕಡಿಮೆ ಅಂತರದಿಂದ ಶಿವಳ್ಳಿ ಗೆಲುವು ಸಾಧಿಸಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಲದೇ ಉಪಚುನಾವಣೆಯಲ್ಲಿ ಹೊಸಮುಖಗಳಿಗೆ ಟಿಕೆಟ್ ನೀಡಿದಲ್ಲಿ ಕಡಿಮೆ ಅವಧಿಯಲ್ಲಿ ಮತಗಳಿಕೆ ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದಾಗಿದೆ. ಈ ಮಧ್ಯೆ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸಹ ಕುಸುಮಾ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಅಳೆದುತೂಗಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ಲಭಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಶುಕ್ರವಾರ ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮಗೊಳ್ಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos