ರಾಜಕೀಯ

ರಮೇಶ್ ಜಾರಕಿಹೊಳಿ ಎರಡು ಏಟು ಹೊಡೆದರೂ ನನಗೆ ಬೇಸರವಿಲ್ಲ: ಡಿಕೆಶಿ

Lingaraj Badiger
ಬೆಂಗಳೂರು: ರಮೇಶ್ ಜಾರಕಿಹೊಳಿಗೆ ತಾವು ಸರಿಸಮನಾದ ನಾಯಕನಲ್ಲ. ಅವರು ತಮಗೆ ಎರಡು ಏಟು ಹೊಡೆದು ಬಿಡಲಿ ಅದರ ಬಗ್ಗೆ ತಾವೇನು ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇಂದು ಜೆಪಿ ನಗರದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ಅಣ್ಣ ತಮ್ಮಂದಿರಲ್ಲಿ ತಪ್ಪುಗಳು ಸಹಜ ಎಂದು ಹೇಳುವ ಮೂಲಕ ಬಂಡಾಯಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆಸಿದರು.
ನಾವು ಸ್ವಂತ ಮನೆ ಮಕ್ಕಳು, ಒಮ್ಮೊಮ್ಮೆ ಜಗಳ ಆಗುತ್ತದೆ. ಅದಕ್ಕೆಲ್ಲಾ ಏನು ಮಾಡಲು ಸಾಧ್ಯವಿಲ್ಲ. ಸಹೋದರರ ನಡುವೆ ಸಣ್ಣಪುಟ್ಟ ಜಗಳ ಎಂದು ಅವರನ್ನು ಬಿಟ್ಟುಕೊಡಲಿಕ್ಕೆ ಆಗುವುದಿಲ್ಲ, ನಾವೆಲ್ಲಾ ಒಂದೇ ಪಕ್ಷದಲ್ಲಿ ಇದ್ದೇವೆ. ಅಣ್ಣ ತಮ್ಮಂದಿರಲ್ಲಿ ಸಣ್ಣಪುಟ್ಟ ಗೊಂದಲಗಳಿರುತ್ತವೆ ಅವುಗಳನ್ನೆಲ್ಲಾ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ ಎಂದರು.
ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕ. ಯೂತ್ ಕಾಂಗ್ರೆಸ್ ನಿಂದ ಬಂದು ಪಕ್ಷ ಸಂಘಟನೆ ಮಾಡಿ ಶಾಸಕರಾಗಿ, ಸಚಿವರಾಗಿದ್ದಾರೆ. ಪಾಪ‌ ಒಂದೊಂದು ಬಾರಿ ಹಾಗೇ ಮಾತನಾಡುತ್ತಾರೆ ಅಷ್ಟೆ. ರಮೇಶ್ ಹಾಗೂ ಸತೀಶ್ ಅಣ್ಣ ತಮ್ಮಂದಿರು. ಹೀಗಾಗಿ ಅವರಿಬ್ಬರು ಮಾತಾಡಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿದೆ ಎಂದು ಅಣ್ಣ ತಮ್ಮಂದಿರ ಕಿತ್ತಾಟದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.  
ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಆದರೆ ಸತೀಶ್ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಪಕ್ಷ ಬಿಟ್ಟು ಹೋಗುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಸರ್ಕಾರ ಪತನವಾಗಲಿದೆ ಎಂದು ಯಾವ ಕಾಂಗ್ರೆಸ್ ಶಾಸಕರು ಹೇಳಿಲ್ಲ. ಅವರ  ಕೆಲಸ ಮಾಡಿಕೊಂಡು ಹೊಗುತ್ತಿದ್ದಾರೆ. 
10ಕ್ಕೂ ಹೆಚ್ಚು ಶಾಸಕರು ಒಟ್ಟಾಗಿ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಜೊತೆಗೆ 80 ಶಾಸಕರು ಇದ್ದೇವೆ ಕೇವಲ 10 ಜನರಲ್ಲ ಎಂದ ಅವರು ಹೇಳಿದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಭೆಯಲ್ಲಿ ಇಂಡಿ ಶಾಸಕ ಶ್ರೀಮಂತ ಪಾಟೀಲ್ ಭಾಗವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಇಂಡಿ ಹಾಗೂ ಬೆಳಗಾವಿ ಭಾಗದ ಕೆಲ ಬಿಜೆಪಿ ಶಾಸಕರು, ಸಂಸದರು ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವ ಸಂಬಂಧ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದೇವೆ. ಈ ಭಾಗದಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಮಹಾರಾಷ್ಟ್ರದವರು ರಾಜ್ಯಕ್ಕೆ ನೀರು ಬಿಡಬೇಕು. ಕುಡಿಯುವ ನೀರಿನ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಶ್ ಸಮಯಾವಕಾಶ ನೀಡಿದರೆ ತಾವೇ ಹೋಗಿ ಅವರ ಜೊತೆ ಮಾತನಾಡುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು ಪ್ರತ್ಯೇಕ ಸಭೆ ನಡೆಸಿದ್ದು , ರಮೇಶ್ ಜಾರಕಿಹೊಳಿ ನಡೆಯಿಂದ ಸಮ್ಮಿಶ್ರ ಸರ್ಕಾರ ರಕ್ಷಿಸಿಕೊಳ್ಳುವ ಬಗ್ಗೆ , ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಗಹನ ಚರ್ಚೆ ನಡೆಯಿತು ಎನ್ನಲಾಗಿದೆ. ಅಲ್ಲದೆ ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ನಡೆಸದಂತೆಯೂ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ ಮುಖ್ಯಮಂತ್ರಿ ನೇತೃತ್ವದ ಸಭೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಜರಾಗುವ ಮೂಲಕ ಕುತೂಹಲ ಮೂಡಿಸಿದರು. ರಮೇಶ್ ಜಾರಕಿಹೊಳಿ ತಂಡದಲ್ಲಿ ಗುರುತಿಸಿಕೊಂಡಿರುವ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಾರೆ ಎಂಬ ಊಹಾಪೋಹಗಳಿದ್ದವು. ಆದರೆ ಇಂದು ಮುಖ್ಯಮಂತ್ರಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮನವೊಲಿಕೆಯಿಂದ ಪಕ್ಷದಲ್ಲಿ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
SCROLL FOR NEXT