ರಾಜಕೀಯ

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯ ಪ್ರವೇಶ: ಕೆಎಂಎಫ್ ನಿರ್ದೇಶಕರಾಗಿ ಆಯ್ಕೆ

Lingaraj Badiger
ಬೆಳಗಾವಿ: ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೆಯ ತಲೆಮಾರು ಪ್ರವೇಶವಾಗಿದೆ. ಜಿಲ್ಲಾ ಕೆಎಂಎಫ್ ನ ನಿರ್ದೇಶಕರಾಗಿ ಅಮರ್ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಹಾಲು ಒಕ್ಕೂಟದ 14 ನಿರ್ದೇಶಕರ ಸ್ಥಾನಗಳಿಗೆ ಏಪ್ರಿಲ್ 21 ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ರಮೇಶ್ ಜಾರಕಿಹೋಳಿ ಪುತ್ರ ಅಮರ ಜಾರಕಿಹೊಳಿ ಸೇರಿದಂತೆ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಏಳು ಸ್ಥಾನಗಳಿಗೆ ಏಪ್ರಿಲ್ 28 ರಂದು‌ ಚುನಾವಣೆ ನಡೆಯಲಿದೆ. 
ಸಹಕಾರಿ ಇಲಾಖೆಯ ಉಪ ನಿಬಂಧಕರು, ರಾಜ್ಯ ಕೆಎಂಎಪ್ ನ ಓರ್ವ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ನಿರ್ದೇಶಕರೊಬ್ಬರು ಸೇರಿದಂತೆ ಒಟ್ಟು 19 ಮತಗಳಿವೆ. ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕ್ ರಾವ್ ಪಾಟೀಲ್ ಪ್ರಸ್ತುತ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. 
ರಾಜ್ಯ ಆಪರೇಷನ್ ಕಮಲದ ಕರಾಮತ್ತು ಜಿಲ್ಲೆಯ ಹಾಲು ಒಕ್ಕೂಟಕ್ಕೂ ಕಾಲಿಟ್ಟಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೆ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯವನ್ನು ಪಡೆದು ಮಗನಿಗೆ ಅಧಿಕಾರ ನೀಡುವ ಕೆಲಸವನ್ನು ರಮೇಶ್ ಜಾರಕಿಹೊಳಿ ಮಾಡಿದ್ದಾರೆ ಎನ್ನಲಾಗಿದೆ.
ಆ ಮೂಲಕ ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆಂಬ ಊಹಾಪೋಹಗಳು ಮತ್ತಷ್ಟು ದೃಢಪಟ್ಟಿವೆ.
SCROLL FOR NEXT