ರಾಜಕೀಯ

ಸರ್ಕಾರ ಪತನ ಯತ್ನದಲ್ಲಿ ರಮೇಶ್ ಜಾರಕಿಹೊಳಿ ಸಫಲರಾಗಲ್ಲ: ಸತೀಶ್ ಜಾರಕಿಹೊಳಿ

Nagaraja AB

ಬೆಂಗಳೂರು: ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಯತ್ನದಲ್ಲಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಸಫಲರಾಗುವುದಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ರಮೇಶ್  ಅವರ ಈ  ರೀತಿಯ ನಡೆಗೆ ನಾನು ಕಾರಣವಲ್ಲ. ಅವರ ಜತೆ ಈಗ ಶಾಸಕರು ಇಲ್ಲ. ಕ್ಯಾಬಿನೆಟ್ ಗೆ ಹೋಗಬೇಡವೆಂದು ತಾವು ಎಂದೂ ರಮೇಶ್ ಜಾರಕಿಹೊಳಿಗೆ ಹೇಳಿಲ್ಲ. ಬೆಳಗಾವಿಗೆ ನಾಯಕರು ಬಂದಾಗ ಅಹ್ವಾನ ಮಾಡಬೇಡ ಅಂತ ನಾವು ಯಾರಿಗೂ ಅಡ್ಡಿಪಡಿಸಿಲ್ಲ.ಅವರ ಸ್ವಯಂ ಕೃತ ತಪ್ಪುಗಳಿಂದ ಮಾಡಿಕೊಂಡಿರುವ ಕೆಲಸ ಎಂದು‌ ಕಿಡಿ‌ಕಾರಿದರು.

ರಮೇಶ್ ಜಾರಕಿಹೊಳಿ‌ ಐದು ಸಲ ಶಾಸಕರಾಗಿದ್ದಾರೆ. ಅವರಿಗೆ ವಿಚಾರ ಮಾಡುವ ಶಕ್ತಿ ಇದೆ. ಇಬ್ಬರು, ಮೂವರು ರಾಜೀನಾಮೆ ಕೊಟ್ಟರೆ ಸರ್ಕಾರಕ್ಕೆ ಸಮಸ್ಯೆ ಇಲ್ಲ. ಈಗಾಗಲೇ ಅನೇಕ ಸಲ ಅವರು ಈ‌ ಪ್ರಯತ್ನ ಮಾಡಿದ್ದಾರೆ. ಅವರ ಬಳಿ ಸಂಖ್ಯಾಬಲ ಕಡಿಮೆ ಇದೆ. ರಮೇಶ್ ಜಾರಕಿಹೊಳಿ ಈಗ ಏಕಾಂಗಿಯಾಗಿದ್ದಾರೆ.ಅವರ ಮೊದಲಿದ್ದಷ್ಟು ಸಂಖ್ಯಾಬಲ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಡಿಕೆ.ಶಿವಕುಮಾರ್ ಅವರ ಉಸ್ತುವಾರಿ ಬಗ್ಗೆ ತಮಗೆ ಯಾವುದೆ ಆಕ್ಷೇಪ‌ ಇಲ್ಲ. ನಾವೆಲ್ಲ ಒಟ್ಟಾಗಿ ಸೇರಿ‌ ಕೆಲಸ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಹಿರಿತನದ ಆಧಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕುಂದಗೋಳದ ಉಸ್ತುವಾರಿ ಕೊಟ್ಟಿದ್ದಾರೆ. ಉಸ್ತುವಾರಿ ಕೊಟ್ಟಿರುವುದರ ಬಗ್ಗೆ ತಮಗೆ ಯಾವುದೇ ಅಸಮಧಾನ ಇಲ್ಲ. ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದು ಜವಾಬ್ದಾರಿ ಎಲ್ಲರ ಮೇಲಿದೆ. ಡಿಕೆ ಶಿವಕುಮಾರ್ ಉತ್ತಮ ಸಂಘಟನ ಚತುರ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಗುಂಡ್ಲುಪೇಟೆ ಮತ್ತು ನಂಜನಗೂಡು ಸೇರಿದಂತೆ ಹಲವು ಉಪಚುನಾವಣೆಗಳು ನಡೆದಿವೆ. ಅದರಲ್ಲಿ ಡಿಕೆ.ಶಿವಕುಮಾರ್ ಸೇರಿದಂತೆ ಹಲವರ ಜೊತೆ ಕೆಲಸ ಮಾಡಿದ್ದೇವೆ. ಪಕ್ಷ ನೀಡುವ ಕೆಲಸವನ್ನು ನಿಷ್ಟಯಿಂದ ಮಾಡುತ್ತೇವೆ.ಈ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ನಮ್ಮನ್ನು ಕೇಳಿ ಪ್ರತಿಕ್ರಿಯಿಸಿದರೆ ಉತ್ತಮವಾಗಿತ್ತು. ಆದರೆ ಅವರು ಏಕಾಏಕಿ  ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ.ನಮ್ಮಲ್ಲಿ ಅವರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

SCROLL FOR NEXT