ರಾಜಕೀಯ

ಮುಖ್ಯಮಂತ್ರಿ ಭೇಟಿ ಮಾಡಿದ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್

Lingaraj Badiger
ಬೆಂಗಳೂರು: ಬಿಎಸ್ ಪಿ ಉಚ್ಚಾಟಿತ ಶಾಸಕ ಎನ್  ಮಹೇಶ್ ಅವರು ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ವಿಧಾನ ಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.
ಇಂದು ಯಡಿಯೂರಪ್ಪ ಅವರು ಸಭೆ ನಡೆಸುತ್ತಿದ್ದ ಸಮಿತಿ ಕೊಠಡಿ ಬಳಿ ಆಗಮಿಸಿದ ಮಹೇಶ್ ಅವರನ್ನುಕೊಠಡಿ ಪ್ರವೇಶಿಸಲು ಅಧಿಕಾರಿಗಳು ನಿರಾಕರಿಸಿದರು. ಬಳಿಕ ಶಾಸಕರಾದ ರಾಜುಗೌಡ, ಗೋವಿಂದ ಕಾರಜೋಳ, ಉದಾಸಿ ಅವರ ಜೊತೆ ಮುಖ್ಯಮಂತ್ರಿ ಕಚೇರಿಗೆ ತೆರಳಿ ಭೇಟಿ ಮಾಡಿದರು.
ಯಡಿಯೂರಪ್ಪ ಅವರೊಂದಿಗೆ ಎನ್ ಮಹೇಶ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.  ಭೇಟಿ ಬಳಿಕ  ಮಹೇಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ  ತೆರಳಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗುವ ಮೂಲಕ ಮೈತ್ರಿ ಪಕ್ಷಕ್ಕೆ  ಮಹೇಶ್ ಆಘಾತ ನೀಡಿದ್ದರು. ಬಳಿಕ ಬಿಎಸ್ಪಿ ವರಿಷ್ಠೆ ಮಾಯಾವತಿ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಿದ್ದರು. 
ಮರು ದಿನ ಪತ್ರಿಕಾಗೋಷ್ಠಿ ನಡೆಸಿದ ಎನ್ ಮಹೇಶ್ ಮಾಹಿತಿಯ ಕೊರತೆಯಿಂದ ತಾವು ಸದನಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನಾನು  ಪಕ್ಷದ ನಾಯಕರ ಸೂಚನೆ ಮೇರೆಗೆ ತಟಸ್ಥನಾಗಿದ್ದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಪಕ್ಷದಿಂದ ಉಚ್ಛಾಟನೆ ಬಗ್ಗೆ ಪಕ್ಷದ ವರಿಷ್ಠರಾದ ಮಾಯಾವತಿ ಅವರನ್ನು ಭೇಟಿ ಮಾಡಿ ಮನವೊಲಿಸುತ್ತೇನೆ ಎಂದು ಹೇಳಿದ್ದರು. ಕೆಲವೇ ದಿನಗಳಲ್ಲಿ ಇದೆಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಸೇರುವ ಬಗ್ಗೆ ಸುಳ್ಳು ಎಂದು ಹೇಳಿದ್ದರು. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುವ ಮೂಲಕ ಹಾಗೂ ಮುಖ್ಯಮಂತ್ರಿ ಅವರನ್ನು ಬಿಜೆಪಿ ಶಾಸಕರ ಜೊತೆ ಭೇಟಿ ಮಾಡುವ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾರೆ.
ಅಲ್ಲದೆ ವಿಶ್ವಾಸ ಮತ ಯಾಚನೆ ವೇಳೆ ಗೈರಾದರೆ ಸಚಿವ ಸ್ಥಾನ ಹಾಗೂ ಹಣ ನೀಡುವುದಾಗಿ ಬಿಜೆಪಿ ನಾಯಕರಿಂದ ಮಹೇಶ್ ಗೆ ಆಹ್ವಾನ ನೀಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ತೀವ್ರ  ಕುತೂಹಲ ಮೂಡಿಸಿದೆ.
SCROLL FOR NEXT