ರಾಜಕೀಯ

ಉಪಚುನಾವಣೆ ಸಮರ: ಪ್ರತ್ಯೇಕವಾಗಿ ಎದುರಿಸಲು ಕಾಂಗ್ರೆಸ್, ಜೆಡಿಎಸ್ ನಿರ್ಧಾರ

Manjula VN
ಬೆಂಗಳೂರು: ಅನರ್ಹಗೊಂಡ ಶಾಸಕರಿಂದ ತೆರವಾಗಿರುವ ಕ್ಷೇತ್ರಗಳಿಗೆ ಎದುರಾಗಲಿರುವ ಉಪಚುನಾವಣೆಗೆ ಮೈತ್ರಿ ಬೇಡ, ಪ್ರತ್ಯೇಕವಾಗಿ ಚುನಾವಣೆ ಎದುರಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧಾರ ಕೈಗೊಂಡಿದೆ. 
ಉಪ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವ ಕುರಿತು ಹೈಕಮಾಂಡ್'ಗೆ ಶಿಫಾರಸು ಮಾಡಲು ಕೆಪಿಸಿಸಿ ಹಿರಿಯ ನಾಯಕರು ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ, ಈ ಎಲ್ಲಾ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಕಣಕ್ಕಳಿಸಲು ಪ್ರಬಲ ಅಭ್ಯರ್ಥಿಗಳ ಹುಡುಕಾಟ ಆರಂಭಿಸಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ. 
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡುರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಾಡಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಿರಿಯ ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಬೇಡ ಎಂದು ಹೈಕಮಾಂಡ್'ಗೆ ಶಿಫಾರಸು ಮಾಡೋಣ. ಆದರೆ, ಅಂತಿಮವಾಗಿ ಈ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗೋಣ ಎಂದು ಸಭೆಯಲ್ಲಿ ನಾಯಕರು ನಿರ್ಧರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಜೆಡಿಎಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ಮಾಜಿ ಶಾಸಕರೊಂದಿಗೆ ಈಗಾಗಲೇ ಒಂದು ಸುತ್ತಿನ ಸಭೆಯನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ. 
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ತೆರವುಗೊಂಡಿರುವ ಕ್ಷೇತ್ರಗಳಲ್ಲಿ ಹಿರಿಯ ನಾಯಕರ ನೇತೃತ್ವದಲ್ಲಿ ಒಂದೊಂದು ತಂಡವನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಈ ತಂಡದ ಮುಖಾಂತರ ನಾಯಕರು ಕಾರ್ಯಗಳನ್ನು ನಿರ್ವಹಿಸಲಿದ್ದಾರೆಂದು ತಿಳಿಸಿದ್ದಾರೆ. 
ಉಪಚುನಾವಣೆ ಸಮರಕ್ಕೆ ಮೈತ್ರಿ ಅಭ್ಯರ್ಥಿಗಳ ಆಯ್ಕೆ ಉತ್ತಮವಾದುದಲ್ಲ. ಮೈತ್ರಿ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಕಾರ್ಯಕರ್ತರು ಒಪ್ಪುವುದೂ ಇಲ್ಲ. ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಕಾರ್ಯಕರ್ತು ಬೆಂಬಲ ನೀಡಲು ಆಸಕ್ತಿ ತೋರುವುದಿಲ್ಲ. ಇದೇ ಕಾರಣಕ್ಕೆ ತುಮಕೂರಿನಲ್ಲಿ ಜೆಡಿಎಸ್ ಸೋಲು ಕಂಡಿತ್ತು ಎಂದು ಹೇಳಿದ್ದಾರೆ. 
SCROLL FOR NEXT