ರಾಜಕೀಯ

ಕೆ.ಎನ್. ರಾಜಣ್ಣ ಜತೆ ಸಿಎಂ ಯಡಿಯೂರಪ್ಪ ಚರ್ಚೆ: ಕುತೂಹಲ ಕೆರಳಿಸಿದ ನಡೆ

Lingaraj Badiger
ಬೆಂಗಳೂರು: ಆಡಳಿತ ಯಂತ್ರ ಚುರುಕುಗೊಳಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗಿನ ಸಭೆಯ ಮಧ್ಯವೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೊರ ಬಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಳಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಸೌಧಕ್ಕೆ ಆಗಮಿಸಿದ್ದ ರಾಜಣ್ಣ, ಯಡಿಯೂರಪ್ಪ ಅವರೊಂದಿಗೆ ವಿಧಾ‌ನಸೌಧದ ಸಮ್ಮೇಳನ ಸಭಾಂಗಣದ ಮುಂಭಾಗದ ಕಾರಿಡಾರ್ ನಲ್ಲಿ ಗುಸು ಗುಸು ಸಮಾಲೋಚನೆ ನಡೆಸಿದರು. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಜೊತೆ ಆಗಮಿಸಿದ ಕೆ.ಎನ್ .ರಾಜಣ್ಣ, ಮುಖ್ಯಮಂತ್ರಿ ಅವರ ಕಿವಿಯಲ್ಲಿ ಏನೋ ಗಹನವಾದ ಮಾಹಿತಿ ಹೇಳುತ್ತಿರುವಂತೆ ಕಂಡು ಬಂತು. 
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ರಾಜಣ್ಣ ಅವರು ಅಧ್ಯಕ್ಷರಾಗಿದ್ದ ತುಮಕೂರು ಡಿಸಿಸಿ‌ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿತ್ತು. ಇದೇ ವಿಚಾರದ ಜತೆಗೆ ಕೆ.ಎಂ.ಎಫ್ ಚುನಾವಣೆ ಕುರಿತಂತೆಯೂ ರಾಜಣ್ಣ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ‌.
ಈ ವೇಳೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರನ್ನು ಕರೆಸಿದ ಯಡಿಯೂರಪ್ಪ, ಅವರಿಂದಲೂ ಮಾಹಿತಿ ಪಡೆದು ಅವರಿಗೆ ಕೆಲ ಸೂಚನೆಗಳನ್ನು ನೀಡುತ್ತಿರುವುದು ಕಂಡು ಬಂತು. 
ಆದರೆ ಈ ಬಗ್ಗೆ ಕೆ.ಎನ್.ರಾಜಣ್ಣ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.
SCROLL FOR NEXT