ರಾಜಕೀಯ

ಬಿಜೆಪಿಗೆ ಸೇರುವುದಿಲ್ಲ, ಬಿಎಸ್ ಪಿ ಗೆ ನಿಷ್ಠನಾಗಿರುತ್ತೇನೆ: ಎನ್.ಮಹೇಶ್

Srinivasamurthy VN
ಚಾಮರಾಜನಗರ: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಇಂದಿಗೂ ನಾನು ಬಿಎಸ್‌ಪಿ ಪಕ್ಷದ ಶಾಸಕನೇ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ನಿಜ. ಆದರೆ, ಅದು ಬಿಜೆಪಿ ಸೇರುವ ಉದ್ದೇಶದಿಂದಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಹಾಗೂ ಹೆಚ್ಚಿನ ಅನುದಾನ ಕೇಳಲು ಹೋಗಿದ್ದೆ ಎಂದು ಹೇಳಿದರು.
ಕೆಲವರು ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಪಕ್ಷದ ಮುಖ್ಯಸ್ಥೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಟ್ವೀಟ್ ಮಾಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಅವರ ಹಿಂದಿನ ನಿರ್ದೇಶನದಂತೆ ವಿಶ್ವಾಸಮತ ವೇಳೆ ಸದನದಿಂದ ದೂರ ಉಳಿದಿದ್ದೆ. ಹೈಕಮಾಂಡ್‌ ಸೂಚನೆಯಂತೆ ನಡೆದುಕೊಂಡಿದ್ದೇನೆ ಎಂದರು. ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರು ಮಾಡಿದ್ದ ಟ್ವೀಟ್​​ನ್ನು ನಾನು ನೋಡಿಲ್ಲ. ಮಾಹಿತಿ ಕೊರತೆಯಿಂದಾಗಿ ಬಿಎಸ್​ಪಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ್ಧಾರೆ. ಮುಂದಿನ ದಿನಗಳಲ್ಲಿ ಅದು ಸರಿಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಸ್ವತಂತ್ರವಾಗಿದ್ದೇನೆ, ಸ್ವತಂತ್ರವಾಗಿಯೇ ಕ್ಷೇತ್ರದ ಕೆಲಸ ಮಾಡುತ್ತೇನೆ.  ಮಾಯಾವತಿಯವರ ಆದೇಶದ ಮೇರೆಗೆ ತಟಸ್ಥವಾಗಿದ್ದೆ ಎಂದು ಸ್ಪಷ್ಟನೆ ನೀಡಿದರು. ಎನ್.ಮಹೇಶ್ ಹಣ ತೆಗೆದುಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.  ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪಗಳೆಲ್ಲಾ ಸುಳ್ಳು. ನಾನು ಯಾವ ಪಕ್ಷಕ್ಕೂ ಸಹಾಯ ಮಾಡಿಲ್ಲ. ನನಗೆ ಯಾವ ಪಕ್ಷದ ಸಹಾಯವೂ ಬೇಡ ಎಂದರು. ಬಿಜೆಪಿ ಸರ್ಕಾರ ಇದೆ, ಅವರಿಂದ ನನ್ನ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತೇನೆ. ಹಿಂದಿನ ಸರ್ಕಾರ ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ನಾನು ಕೇಳಿದಷ್ಟು ಅನುದಾನವನ್ನು ನೀಡಲಿಲ್ಲ ಎಂದು ಮಹೇಶ್​ ಮೈತ್ರಿ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
SCROLL FOR NEXT