ರಾಜಕೀಯ

ಬೆನ್ನಿಗೆ ಚೂರಿ ಹಾಕೋರನ್ನ ನಂಬೋಕೆ ಹೋಗ್ಬೇಡಿ: ಕುಮಾರಸ್ವಾಮಿಗೆ ಬಸವರಾಜ್ ಹೊರಟ್ಟಿ

Raghavendra Adiga
ಬೆಂಗಳೂರು: ಕೆಲವರು ಕುಮಾರಸ್ವಾಮಿ ಅವರನ್ನು ಹೊಗಳುತ್ತಾರೆ ಆದರೆ ಅವರೇ ಇವರಿಗೆ ಮೋಸ ಮಾಡುತ್ತಾರೆ, ಮೋಸ ಮಾಡುವವರು ಪಕ್ಷದಲ್ಲಿ ಇರುವವರೆಗೂ ಜೆಡಿಎಸ್ ಉದ್ದಾರ ಆಗುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಬೆನ್ನಿಗೆ ಚೂರಿ ಹಾಕುವವರನ್ನು ಕುಮಾರಸ್ವಾಮಿ ನಂಬಬಾರದು. ನಂಬಿದ್ದಕ್ಕೆ ಪಕ್ಷ ಹಾಗು ಸರ್ಕಾರಕ್ಕೆ ಈ ಗತಿ ಬಂದೊದಗಿದೆ ಎಂದು ವಿಧಾನ ಪರಿಷತ್ ಸದಸ್ಯ,ಜೆಡಿಎಸ್ ಉಪಾಧ್ಯಕ್ಷ ಬಸವರಾಜ್ ಹೊರಟ್ಟಿ ಪಕ್ಷದ ನಾಯಕರಿಗೆ ತೀಕ್ಷ್ಣ ಪದಗಳಲ್ಲಿ ಟೀಕಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ತುಂಬಾ ಜನ ಅವರ ಹಿಂದೆ ಮುಂದೆ ಸುಳಿಡಾಡುತ್ತಾರೆ. ಹೊಗಳುವವರೇ ಅವರಿಗೆ ಮೋಸ ಮಾಡಿದ್ದಾರೆ. ಹೀಗಾಗಿ ಬೆನ್ನಿಗೆ ಚೂರಿ ಹಾಕುವವರನ್ನು ಕುಮಾರಸ್ವಾಮಿ ನಂಬಬಾರದು. ಮುಖ್ಯಮಂತ್ರಿಯಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಜನರ ಮನಸ್ಸಿನಲ್ಲಿ ಅವರು ಉಳಿಯಲಿಲ್ಲ ಎಂಬುದೇ ತಮಗೆ ಅರ್ಥವಾಗದ ಸಂಗತಿ, ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆಯೇ ಎಲ್ಲವೂ 'ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ' ಎಂದು ಈ ನಾಯಕರ ವರ್ತನೆಯನ್ನು ಲೇವಡಿ ಮಾಡಿದರು.
ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸದಸ್ಯರು ಅಧಿಕಾರದಲ್ಲಿದ್ದಾಗ ಪಕ್ಷ ಸಂಘಟನೆಗಾಗಿ ಏನೂ ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರತೀ ಜಿಲ್ಲೆಯಲ್ಲಿ ಪಕ್ಷದ ಕಚೇರಿ ಕಟ್ಟಿದ್ದಾರೆ. ಆದರೆ ನಮ್ಮವರು ಪಕ್ಷ ಸಂಘಟನೆಗಾಗಿ ಪ್ರಾಮಾಣಿಕ ಕೆಲಸ ಮಾಡಿಲ್ಲ. ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಆಗಿದ್ದ ಉತ್ತಮ ಕೆಲಸಗಳು, ಅಭಿವೃದ್ದಿ ಕಾರ್ಯಕ್ರಮಗಳು ಮೈತ್ರಿ ಸರ್ಕಾರದ 14 ತಿಂಗಳಿನಲ್ಲಿ ನಡೆದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
SCROLL FOR NEXT