ರಾಜಕೀಯ

ಸ್ವಾತಂತ್ರ್ಯ ದಿನಾಚರಣೆ ಬಳಿಕ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ

Vishwanath S

ಬೆಳಗಾವಿ: ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಗೊಂದಲಕ್ಕೆ ತೆರೆಬೀಳುವ ಲಕ್ಷಣಗಳು ಕಂಡುಬಂದಿದ್ದು, ಆ 15 ರ ಬಳಿಕ ಮಂತ್ರಿಮಂಡಲ ವಿಸ್ತರಣೆ ನಡೆಯುವ ಸಾಧ‍್ಯತೆಯಿದೆ.

ಸ್ವಾತಂತ್ರ ದಿನಾಚರಣೆ ಮರುದಿನ ಸಂಪುಟ ವಿಸ್ತರಣೆ ಮಾಡಲು ದಿನಾಂಕ ನಿಗದಿ ಪಡಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರ ರಚನೆಯಾಗಿ ತಿಂಗಳು ಹತ್ತಿರವಾಗಿದ್ದರೂ ಇದೂವರೆಗೂ ಸಂಪುಟ ವಿಸ್ತರಣೆ ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು ಮಂತ್ರಿಗಳಿಲ್ಲದೇ ಯಡಿಯೂರಪ್ಪ ಒಬ್ಬರೇ ಎಲ್ಲವನ್ನೂ ನಿಭಾಯಿಸುವ ಸ್ಥಿತಿ ತಲೆದೋರಿದೆ.

ಇನ್ನು ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 15 ದಿನ ಕಳೆದುಹೋಗಿದ್ದು, ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೇ ‘ಏಕಾಧಿಪತ್ಯ’ವೇ ನಡೆಯುತ್ತಿದೆ. ಸರ್ಕಾರ ರಚನೆ ಮಾಡಲು ತೋರಿದ ತರಾತುರಿಯನ್ನು ಸಚಿವ ಸಂಪುಟ ವಿಸ್ತರಣೆಗೆ ತೋರದೇ ಇರುವುದಕ್ಕೆ ವಿರೋಧ ಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. 18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳು ನಡುಗಡ್ಡೆಗಳಾಗಿವೆ. ಸಾವಿರಾರು ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಇಂತಹ ಹೊತ್ತಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೆ ಪರಿಹಾರ ಕಾಮಗಾರಿಯ ಮೇಲುಸ್ತುವಾರಿ ಮಾಡಬಹುದಿತ್ತು. ಮುಖ್ಯಮಂತ್ರಿ ಒಬ್ಬರೇ ಇರುವುದರಿಂದ ಅವರು ಒಂದೇ ಹೊತ್ತಿನಲ್ಲಿ ಎರಡು ಮೂರು ಜಿಲ್ಲೆಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಇರುವುದರಿಂದ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು.

SCROLL FOR NEXT