ರಾಜಕೀಯ

ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ-ಬಿ ಎಸ್ ಯಡಿಯೂರಪ್ಪ 

Sumana Upadhyaya

ವಿಜಯಪುರ/ಬಾಗಲಕೋಟೆ: ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡು ಎರಡು ವಾರಗಳು ಕಳೆದಿದ್ದು ಇನ್ನೂ ಸಚಿವ ಸಂಪುಟ ರಚನೆ ಮಾಡಿಲ್ಲ ಎಂದು ಪ್ರತಿಪಕ್ಷಗಳಿಂದ ಹಿಡಿದು ರಾಜ್ಯದ ಜನತೆ ಕೂಡ ಟೀಕಿಸುತ್ತಿದ್ದಾರೆ. ಇದೀಗ ಮುಂದಿನ ವಾರ ಸಂಪುಟ ರಚನೆ ಮಾಡುವುದಾಗಿ ಸ್ವತಃ ಬಿ. ಎಸ್ ಯಡಿಯೂರಪ್ಪನವರೇ ಹೇಳಿದ್ದಾರೆ. ಮುಂದಿನ ವಾರ ಸಂಪುಟಕ್ಕೆ ಸಚಿವರನ್ನು ಸೇರ್ಪಡೆ ಮಾಡುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.


ಈ ಬಾರಿ ಕಂಡೂ ಕೇಳರಿಯದಷ್ಟು ಮಳೆ, ಪ್ರವಾಹ, ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ರಾಜ್ಯದ 17 ಜಿಲ್ಲೆಗಳಲ್ಲಿ ಉಂಟಾಗಿದ್ದು ಆ ಕುರಿತು ಹೆಚ್ಚು ಗಮನ ನೀಡಬೇಕಾಗಿದ್ದರಿಂದ ಸಚಿವ ಸಂಪುಟ ರಚನೆ ವಿಳಂಬವಾಗುತ್ತಿದೆ. ಸಚಿವ ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಲೆಂದು ದೆಹಲಿಗೆ ಹೋಗಿದ್ದ ಯಡಿಯೂರಪ್ಪನವರು ಕಳೆದ ವಾರ ಭಾರೀ ಮಳೆ, ಪ್ರವಾಹದಿಂದಾಗಿ ಪ್ರವಾಸವನ್ನು ಮೊಟಕುಗೊಳಿಸಿ ಅರ್ಧಕ್ಕೆ ರಾಜ್ಯಕ್ಕೆ ವಾಪಸ್ ಬರಬೇಕಾಗಿ ಬಂದಿತ್ತು. ರಾಜ್ಯದಲ್ಲಿ ಇಷ್ಟೊಂದು ಮಳೆ, ಪ್ರವಾಹ ಉಂಟಾಗಿರದಿದ್ದರೆ ಇಷ್ಟು ಹೊತ್ತಿಗೆ ಸಚಿವ ಸಂಪುಟ ರಚನೆಯಾಗುತ್ತಿತ್ತು ಎಂದಿದ್ದಾರೆ ಯಡಿಯೂರಪ್ಪನವರು.


ಮುಂದಿನ ವಾರ ಮತ್ತೆ ಯಡಿಯೂರಪ್ಪನವರು ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿ ಅದಕ್ಕೆ ಒಪ್ಪಿಗೆ ಪಡೆದು ಬರಲಿದ್ದಾರೆ. ರಾಜ್ಯದಲ್ಲಿನ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದ ಉಸ್ತುವಾರಿಯಲ್ಲಿ ತೊಡಗಿರುವ ಮುಖ್ಯಮಂತ್ರಿಗಳು ಸದ್ಯ ಸಂಪುಟ ರಚನೆ ಮೇಲೆ ಗಮನ ಹರಿಸುತ್ತಿಲ್ಲ. 


ಸಚಿವ ಸಂಪುಟ ರಚನೆ ವೇಳೆ ಎಲ್ಲಾ ಜಾತಿ ಮತ್ತು ಪ್ರದೇಶಗಳನ್ನು ಪರಿಗಣಿಸಿ ಸಮಾನ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

SCROLL FOR NEXT