ರಾಜಕೀಯ

ಶಕ್ತಿ ಸೌಧದಲ್ಲಿ ಹಲ್ಲೆ: ಮಾಜಿ ಶಾಸಕನ ವಿರುದ್ಧ ಎಫ್ ಐಆರ್ ದಾಖಲು

Nagaraja AB

ಬೆಂಗಳೂರು: ಜುಲೈ 10 ರಂದು ಶಕ್ತಿ ಸೌಧ ವಿಧಾನಸೌಧದಲ್ಲಿ ರಾಜೀನಾಮೆ ಕೊಡಲು ಹೋಗಿದ್ದಾಗ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಸುಧಾಕರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್ ಮಾಜಿ ಶಾಸಕ ನಜೀರ್ ಅಹ್ಮದ್ ವಿರುದ್ಧ ವಿಧಾನಸೌಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣ ಸಂಬಂಧ ಜುಲೈ 23 ರಂದು ವಕೀಲ ಅಮೃತೇಶ್ ಎನ್ ಪಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಎಫ್ ಐಆರ್  ದಾಖಲು ಮಾಡಿರಲಿಲ್ಲ. ನಂತರ ಪೊಲೀಸರು ಉದ್ದೇಶಪೂರ್ವಕವಾಗಿಯೇ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ದೂರುದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಶನಿವಾರ ಸುಧಾಕರ್ ಅವರಿಂದ ಹೇಳಿಕೆ ಪಡೆದ ಪೊಲೀಸರು ಹೇಳಿಕೆ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಮಾನ ಹಾನಿ, ಹಲ್ಲೆ ಮತ್ತಿತರ ಆರೋಪದಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಆದಾಗ್ಯೂ , ಪೊಲೀಸರು ಈವರೆಗೂ ನಜೀರ್ ಅಹ್ಮದ್ ಮತ್ತಿತರನ್ನು ವಿಚಾರಣೆಗೊಳಪಡಿಸಿಲ್ಲ.

ಜುಲೈ 10 ರಂದು ಸುಧಾಕರ್ ರಾಜೀನಾಮೆ ನೀಡುವಾಗ ಅವರನ್ನು ಕೆಲ ಕಾಂಗ್ರೆಸ್ ಮುಖಂಡರು ಕುತ್ತಿಗೆ ಪಟ್ಟಿಗೆ ಹಿಡಿದು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ನಂತರ ರಾಜ್ಯಪಾಲರ ಸೂಚನೆ ಮೇರೆಗೆ ಪೊಲೀಸರು ಸುಧಾಕರ್ ಅವರನ್ನು ರಕ್ಷಿಸಿದ್ದರು.

SCROLL FOR NEXT