ರಾಜಕೀಯ

ಎಚ್.ಡಿ‌.ಕುಮಾರಸ್ವಾಮಿ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು

Srinivasamurthy VN

ಬೆಂಗಳೂರು: ವರ್ಗಾವಣೆ ದಂಧೆಯಲ್ಲಿ ಪುತ್ರ ವಿಜಯೇಂದ್ರ ಕೈವಾಡವಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಯವಾಗಿಯೇ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಆ ಬಗ್ಗೆ ತಮ್ಮ ಬಾಯಿಂದ ಹೇಳುವುದು ಸರಿಯಲ್ಲ.‌ ಜನರಿಗೆ ಎಲ್ಲವೂ ಗೊತ್ತಿದೆ. ದೇವರು ಅವರಿಗೆ ಒಳ್ಳೆಯದು ಮಾಡಲೀ ಎಂದು ಸೂಚ್ಯವಾಗಿ ಹೇಳಿದರು. ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಒಂದೇ ತಿಂಗಳಲ್ಲಿ ಎಷ್ಟು ವರ್ಗಾವಣೆ ಮಾಡಿದ್ದರು ಎಂಬುದನ್ನು ಸ್ವತಃ ಅವರು  ಪರಾಮರ್ಶಿಸಿಕೊಳ್ಳಲಿ. ಕೇವಲ ಒಂದು ತಿಂಗಳಿನಲ್ಲಿಯೇ ಕುಮಾರಸ್ವಾಮಿ ಸಾವಿರಾರು ಅಧಿಕಾರಿಗಳನ್ನು ವರ್ಗ ಮಾಡಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.

ಇದೇ ಸಂದರ್ಭದಲ್ಲಿ ಜೈ ಸಂಘಟನೆಗಳ ಹಿಂದಿ ಬ್ಯಾನರ್ ತೆರವು ವಿವಾದದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ಶೆಟ್ಟರ್ ಹೇಳಿದರು‌. ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಟೆಲಿಗ್ರಾಫ್ ಕಾಯ್ದೆ ಪ್ರಕಾರ ಟೆಲಿಫೋನ್ ಕದ್ದಾಲಿಕೆ ಶಿಕ್ಷಾರ್ಹ ಅಪರಾಧ. ಕುಮಾರಸ್ವಾಮಿಯವರು ಟೆಲಿಫೋನ್ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ ಈ ಪ್ರಕರಣವನ್ನು ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ ಎಂದು ಆಗ್ರಹಿಸಿದರು.

ರಾಜರಾಜೇಶ್ವರಿ ನಗರ ಅನರ್ಹ ಶಾಸಕ ಮುಬಿರತ್ನ ಮಾತನಾಡಿ, ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು. ಹಲವರ ಫೋನ್ ಟ್ಯಾಪಿಂಗ್ ಆಗಿದೆ. ಈ ಬಗ್ಗೆ ಮೊದಲು ದಾಖಲೆ ಇರಲಿಲ್ಲ. ಆದರೀಗ ದಾಖಲೆ ಸಿಕ್ಕಿದೆ ಎಂದ ಅವರು ತಮ್ಮ ದೂರವಾಣಿ ಕದ್ದಾಲಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

SCROLL FOR NEXT