ರಾಜಕೀಯ

ಆಪರೇಷನ್ ಕಮಲ ಕೂಡ ಸಿಬಿಐ ತನಿಖೆಯಾಗಲಿ; ಸಿದ್ದರಾಮಯ್ಯ, ಖರ್ಗೆ ಆಗ್ರಹ

Srinivasamurthy VN

ಟೆಲಿಫೋನ್ ಕದ್ದಾಲಿಕೆ ಸಂಬಂಧ ಸಿಬಿಐ ತನಿಖೆಗೆ ಆದೇಶಿಸಿರುವ ಸಿಎಂ ಯಡಿಯೂರಪ್ಪಗೆ ಕೈ ನಾಯಕರ ಸವಾಲ್

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವ ಸಿಎಂ ಯಡಿಯೂರಪ್ಪ ಆಪರೇಷನ್ ಕಮಲ ಪ್ರಕರಣವನ್ನೂ ಕೂಡ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐ‌ಗೆ ಒಪ್ಪಿಸುವ ಮುಖ್ಯಮಂತ್ರಿ ಬಿಎಸ್ವೈ ನಿರ್ಧಾರ ಸ್ವಾಗತಾರ್ಹ. ಪೋನ್ ಕದ್ದಾಲಿಕೆಯ ತನಿಖೆಯನ್ನು ನನ್ನ ಮನವಿ ಮೇರೆಗೆ ಸಿಬಿಐಗೆ ಒಪ್ಪಿಸಲಾಗಿದೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಇತ್ತೀಚಿನ 'ಆಪರೇಷನ್ ಕಮಲ'ದಲ್ಲಿಯೂ ಕೋಟ್ಯಂತರ ರೂ.ಗಳ ದುರ್ವ್ಯವಹಾರ ನಡೆದಿದೆ ಎಂಬ ಆರೋಪ‌ ಇದೆ. ಅದರ ಬಗ್ಗೆಯೂ ಸಿಬಿಐನಿಂದ ತನಿಖೆ ನಡೆಸಬೇಕೆಂದು ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ" ಎಂದಿದ್ದಾರೆ.

ಅಂತೆಯೇ 'ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಸತತ ಒತ್ತಾಯದ ಹೊರತಾಗಿಯೂ ಒಂದೇ ಒಂದು ಹಗರಣವನ್ನು ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ಒಪ್ಪಿಸದೆ  ಇದ್ದ ಬಿಜೆಪಿ, ಈಗ ಇದ್ದಕ್ಕಿದ್ದಂತೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಹುಟ್ಟಿರುವುದು ಆಶ್ಚರ್ಯಕರ ಬೆಳವಣಿಗೆ. ಆದರೆ, ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ‌‌‌ ಎಂದು ನಂಬಿದ್ದೇನೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಆಪರೇಷನ್‌ ಕಮಲ ಪ್ರಕರಣವನ್ನೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

'ಕುಮಾರಸ್ವಾಮಿ ಸರ್ಕಾರದಲ್ಲಿ ನಡೆಸಲಾಗಿದೆ ಎಂಬ ಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿರುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಇದರ ಜೊತೆಗೆ ಆಪರೇಷನ್‌ ಕಮಲ ಪ್ರಕರಣವನ್ನೂ ತನಿಖೆ ನಡೆಸಬೇಕು. ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸಬೇಕೆಂದು ನಾನು ಈ ಮೊದಲೂ ಹೇಳಿದ್ದೆ. ಸಿಬಿಐ ತನಿಖೆ ನಡೆಸಿದರೆ ಉತ್ತಮ. ಆದರೆ ತನಿಖೆ ಏಕಮುಖವಾಗಿ ನಡೆಯಬಾರದು. ನಿಸ್ಪಕ್ಷವಾದ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಬಿಜೆಪಿಯವರು ಅಧಿಕಾರ ಹಿಡಿಯಲು ಯಾರಿಗೆಲ್ಲಾ ಆಮಿಷ ಒಡ್ಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.

SCROLL FOR NEXT