ರಾಜಕೀಯ

ಹೈ ಕಮಾಂಡ್ ‌ಮೇಲೆ ಒತ್ತಡ‌ ಹೇರುವ ಕೆಲಸ ಅನರ್ಹ ಶಾಸಕರು ಮಾಡಿಲ್ಲ: ಡಾ.ಅಶ್ವಥ್ ನಾರಾಯಣ್

Shilpa D

ಬೆಂಗಳೂರು: ಅನರ್ಹ ಶಾಸಕರು ನ್ಯಾಯಾಲಯದ ವಿಚಾರಕ್ಕಾಗಿ ನವದೆಹಲಿಗೆ ಬಂದಿದ್ದಾರೆ. ಹೈಕಮಾಂಡ್ ‌ಮೇಲೆ ಒತ್ತಡ‌ ಹೇರುವ ಕೆಲಸವನ್ನು ಯಾರು ಮಾಡಿಲ್ಲ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ‌ನವದೆಹಲಿಯಲ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ತ್ವರಿತವಾಗಿ ಆರಂಭಿಸಲು ಅಗತ್ಯ ರೂಪುರೇಷೆ ಮಾಡುವ  ಸಲುವಾಗಿ‌ ಅನರ್ಹ ಶಾಸಕರು ದೆಹಲಿಯಲ್ಲಿ ಇದ್ದಾರೆ. ಕಾನೂನಾತ್ಮಕ ಅಡೆತಡೆ ಸರಿಪಡಿಸಿಕೊಳ್ಳಲು ಎಲ್ಲ ಪ್ರಯತ್ನ ‌ನಡೆಸಿದ್ದಾರೆ ಎಂದರು.

ಅನರ್ಹ ಶಾಸಕರಿಗೆ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನ್ಯಾಯ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅನರ್ಹರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡುವ ವಿಚಾರದ ಬಗ್ಗೆ ಮಾಹಿತಿಯಿಲ್ಲ. ಸಚಿವ ಸ್ಥಾನ ವಂಚಿತರಾಗಿರುವ ಉಮೇಶ್ ಕತ್ತಿ ಜತೆ ಮುಖ್ಯಮಂತ್ರಿಯವರು ಮಾತುಕತೆ ‌ನಡೆಸಿದ್ದಾರೆ. ಕತ್ತಿ ಅಸಮಾಧಾನ ತೋಡಿಕೊಂಡಿಲ್ಲ. ಪಕ್ಷದ ಹಿರಿಯ ನಾಯಕರು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ. ನೂತನ ಸಚಿವರ ಖಾತೆ ಹಂಚಿಕೆ ಬಹುತೇಕ ಇಂದು ಅಂತಿಮವಾಗುವ ಸಾದ್ಯತೆಗಳಿವೆ ಎಂದು ಅವರು ತಿಳಿಸಿದರು.

ಖಾತೆ ಹಂಚಿಕೆ ವಿಷಯದಲ್ಲಿ ಹೈಕಮಾಂಡ್ ಜೊತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹಾಗೂ ಸಚಿವ ಅಶ್ವಥ್ ನಾರಾಯಣ ಕಳೆದ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ.

SCROLL FOR NEXT