ರಾಜಕೀಯ

ಮಂತ್ರಿಯಾಗಲು ಯಾರನ್ನು ಭಿಕ್ಷೆ ಬೇಡಲ್ಲ: ಎಂ ಪಿ ರೇಣುಕಾಚಾರ್ಯ

Lingaraj Badiger

ಚಿತ್ರದುರ್ಗ: ಮಂತ್ರಿ ಆಗಬೇಕೆಂದು ಯಾರನ್ನೂ ಭಿಕ್ಷೆ ಬೇಡುವುದಿಲ್ಲ ಮತ್ತು ಅದರ ಅವಶ್ಯಕತೆಯೂ ತಮಗೆ ಇಲ್ಲ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ. 

ಇಂದು ಸಿರಿಗೆರೆ ತರಳಬಾಳು ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏಳು ಬೀಳುಗಳು ಸಹಜ. ಕೆಳಗಿದ್ದವರು ಮೇಲೆ ಬರುತ್ತಾರೆ ಅಂತೆಯೇ ಮೇಲಿದ್ದವರು ಕೆಳಗೆ ಬರುತ್ತಾರೆ. ಆದರೆ ಇಂದು ಯಡಿಯೂರಪ್ಪಗೆ ಸಂಕಷ್ಟದಲ್ಲಿ ಬೆಂಬಲ ನೀಡದವರು ಸಚಿವರಾಗಿದ್ದಾರೆ ಎಂದು ಲಕ್ಷ್ಮಣ್ ಸವದಿ ವಿರುದ್ಧ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಲವರು ಈಗ ನೀತಿ ಪಾಠ ಹೇಳುತ್ತಿದ್ದಾರೆ. ಅಂತಹವರಿಂದ ನೀತಿ ಪಾಠ ಕೇಳುವ ಅವಶ್ಯಕತೆ ತಮಗಿಲ್ಲ. ನನಗೆ ಸಾಮರ್ಥ್ಯ ಇದೆ. ಜಿಲ್ಲೆಯಲ್ಲಿ ಆರು ಜನ ಬಿಜೆಪಿ ಶಾಸಕರಿದ್ದೇವೆ. ರಾಜಧಾನಿ ಆಗುವ ಸಾಮರ್ಥ್ಯ ದಾವಣಗೆರೆ ಜಿಲ್ಲೆಗೆ ಇತ್ತು. ಬಿಜೆಪಿ ಭದ್ರಕೋಟೆಯನ್ನು ಕಡೆಗಣಿಸಬೇಡಿ ಎಂಬ ಮಾತಿಗೆ ನಾನು ಬದ್ದನಾಗಿದ್ದೇನೆ. ನಾನೊಂದುರೀತಿಯ ಬಂಡೆ ಇದ್ದ ಹಾಗೆ. ಜಗ್ಗಲ್ಲ ಬಗ್ಗಲ್ಲ, ಬಂಡೆಯ ಥರ ದೈತ್ಯ ಶಕ್ತಿ ತಮಗಿದೆ. ನಾನು ಹೊನ್ನಾಳಿ ಹುಲಿ ಎಂದು ರೇಣುಕಾಚಾರ್ಯ ತಮ್ಮ ಸಾಮರ್ಥ್ಯವನ್ನು ತಾವೇ ಹೊಗಳಿಕೊಂಡರು.

ನಂತರ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡುವುದಕ್ಕೆ ಅಷ್ಟೊಂದು ಅವಸರವಿತ್ತೇ ಎಂದು ಪ್ರಶ್ನಿಸಿರುವ ಅವರು, ಪಕ್ಷದಲ್ಲಿ ಹಿರಿಯರು, ಹಲವಾರು ಭಾರಿ ಗೆದ್ದವರು, ಹಿರಿಯ ನಾಯಕರು ಬಹಳ ಜನ ಇದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬಹುದಿತ್ತು. ಆದರೆ ತಮಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಬೇಸರವಿಲ್ಲ ಎಂದರು.
 
ತನಗೆ ಅಧಿಕಾರ, ಸ್ಥಾನಮಾನ ಬೇಕಿದ್ದರೆ  ಮುಖ್ಯಮಂತ್ರಿ  ಯಡಿಯೂರಪ್ಪ ಅವರ ಜೊತೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡುತ್ತೇನೆ ಎಂದ ಅವರು, ಉಮೇಶ್ ಕತ್ತಿ ಬೇರೆ ಎಲ್ಲೂ ಹೋಗುವುದಿಲ್ಲ, ತಮ್ಮ ಜೊತೆ ಶುಕ್ರವಾರ ಮಾತನಾಡಿದ್ದಾರೆ. ಅವರು ಬಿಜೆಪಿ ಪಕ್ಷದಲ್ಲೇ ಇರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT