ಬೆಂಗಳೂರು: ಕೇಂದ್ರ ಸರ್ಕಾರ ಕಟಾಚಾರಕ್ಕೆ ಅಧ್ಯಯನ ತಂಡ ಕಳುಹಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತುರ್ತು ನಿರ್ವಹಣೆಗಾಗಿ ಕನಿಷ್ಠ 3 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಬದಲು ಅಧ್ಯಯನ ತಂಡ ಕಳುಹಿಸಿದೆ. ಇದರ ವರದಿ ಆಧರಿಸಿ ಪರಿಹಾರ ಬಿಡುಗಡೆ ಯಾವಾಗ ಎಂದು ಪ್ರಶ್ನಿಸಿದರು.
ಕೇಂದ್ರದ ನೆರೆ ಅಧ್ಯಯನ ತಂಡ ಪ್ರವಾಹ ಸಂತ್ರಸ್ತ ಸ್ಥಳಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಮಗ್ರವಾಗಿ ಅಧ್ಯಯನ ಮಾಡುತ್ತಿಲ್ಲ. 1029 ಕೋಟಿ ರೂಪಾಯಿ ಬರ ಪರಿಹಾರದ ನೆರವು ಪ್ರಕಟಿಸಿದೆ. ಆದರೆ, ಅತಿವೃಷ್ಟಿ ಪರಿಹಾರಕ್ಕಾಗಿ ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ಸಚಿವರು ಖಾತೆಗಾಗಿ ಕಿತ್ತಾಟದಲ್ಲೇ ಸರ್ಕಾರ ಸಂಪೂರ್ಣ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಅಧ್ಯಯನ ತಂಡ ನಡೆಸುತ್ತಿರುವ ಸಮೀಕ್ಷೆಯ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಕಾಟಾಚಾರಕ್ಕೆ ಎಂಬಂತೆ ಅವರು ಅಧ್ಯಯನ ಮಾಡುತ್ತಿದ್ದಾರೆ. ಇವರಿಂದ ಪರಿಹಾರ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕೇಂದ್ರದಿಂದ ಹಣ ಬಿಡುಗಡೆಯೂ ಆಗುವುದಿಲ್ಲ ಎಂದರು.