ರಾಜಕೀಯ

ಕುಣಿಯಲಾರದವಳು ನೆಲ ಡೊಂಕು ಎಂದಳಂತೆ, ಸಿದ್ದರಾಮಯ್ಯ ಗಾದೆ ಮಾತು, ವಿವಾದ...!! 

Srinivas Rao BV

ಬೆಂಗಳೂರು: ಕುಣಿಯಲಾರದವಳು--- ನೆಲ ಡೊಂಕು ಎಂದಳಂತೆ" ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿಕೆ ವಿವಾದದ ಸ್ಪರೂಪ ಪಡೆದುಕೊಂಡಿದೆ.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ತಾವೇ ಕಾರಣ ಎಂಬ ದೇವೇಗೌಡರ ಟೀಕೆಗೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕುಣಿಯಲಾರದವಳು ನೆಲ ಡೊಂಕು ಎಂದಳಂತೆ. ಹೀಗಾಗಿದೆ ಜೆಡಿಎಸ್ ಕಥೆ. ಈ ಆರೋಪಗಳಿಗೆ ತಾವು ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಮತ್ತೆ ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ ಎಂದರು. 

ಈ ಹೇಳಿಕೆ ಬಗ್ಗೆ ವಿವಾದ ಉಂಟಾಗುತ್ತಿದ್ದಂತೆ ಧರ್ಮಸ್ಥಳದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ತಾವು ಬಿಜೆಪಿ ನಾಯಕರನ್ನು ಉದ್ದೇಶಿಸಿ ಟೀಕೆ ಮಾಡಿದ್ದು, ಇದರಲ್ಲಿ ವಿವಾದ ಸೃಷ್ಟಿಸುವ ಯಾವುದೇ ಅಂಶಗಳಿಲ್ಲ. ಕುಣಿಯಲಾರದ ನೃತ್ಯಗಾತಿ ನೆಲಡೊಂಕು ಎಂದಳಂತೆ ಎನ್ನುವುದು ನಮ್ಮ ಹಳ್ಳಿಗಳಲ್ಲಿ ಸಾಮಾನ್ಯ ಗಾದೆ ಮಾತಾಗಿದೆ. ಆದರೆ ಬಿಜೆಪಿಯವರಿಗೆ ವಿವಾದ ಸೃಷ್ಟಿ ಮಾಡುವುದೇ ಕೆಲಸವಾಗಿದೆ ಎಂದು ಟೀಕಿಸಿದರು. ಇದಕ್ಕೂ ಮುನ್ನ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣಕ್ಕೆ ಮುಂದಾಗಿರುವ  ಕೇಂದ್ರ ಸರ್ಕಾರ ಜಾರಿ  ನಿರ್ದೆಶನಾಲಯವನ್ನು  ದುರ್ಬಳಕೆ  ಮಾಡಿಕೊಂಡು ಡಿ.ಕೆ ಶಿವಕುಮಾರ್ ವಿರುದ್ಧ ಪಿತೂರಿ ನಡೆಸುತ್ತಿದೆ. 

ರಾಜಕೀಯ ದುರುದ್ದೇಶದಿಂದ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು. ಶಿವಕುಮಾರ್‌ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಆದರೆ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಇದು ಹೀಗೇ ಮುಂದುವರಿಯುತ್ತಿದ್ದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 

SCROLL FOR NEXT