ರಾಜಕೀಯ

ರಾಜ್ಯಸಭಾ ಉಪಚುನಾವಣೆ: ಕೈ ಜೋಡಿಸಿದ ಜೆಡಿಎಸ್-ಕಾಂಗ್ರೆಸ್ 

Manjula VN

ಬೆಂಗಳೂರು: ರಾಜ್ಯಸಭಾ ಉಪಚುನಾವಣೆಗೆ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಈ ಬಗ್ಗೆಇಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಕೆ.ಸಿ.ರಾಮಮೂರ್ತಿ ಅವರು ಕಣಕ್ಕಿಳಿಯಲಿದ್ದಾರೆ. 

ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಸಿ.ರಾಮಮೂರ್ತಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕಾಗಿ ಡಿ.12ರಂದು ಚುನಾವಣೆ ನಡೆಯಲಿದೆ. ಶಾಸಕರ ಸಂಖ್ಯೆಯ ಬಲಾಬಲದ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾದರೂ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿಲ್ಲ. ಹೀಗಿದ್ದರೂ ಉಪಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಗೆಲುವಿನ ಹಾದಿ ಸುಲಭವಾಗಲಿದೆ ಎಂಬ ದೂರಾಲೋಚನೆ ಹಿನ್ನಲೆಯಲ್ಲಿ ಎರಡೂ ಪಕ್ಷಗಳು ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಲಿವೆ.

ಗೆಲ್ಲಲು ಬೇಕಾದ ಶಾಸಕರ ಸಂಖ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್'ಗೆ ಇಲ್ಲದ ಕಾರಣ ಉಭಯ ಪಕ್ಷಗಳಿಗೂ ಒಪ್ಪಿಗೆಯಾಗುವ ವ್ಯಕ್ತಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವುದು ಸೂಕ್ತ ಎಂಬ ಚಿಂತನೆ ಉಭಯ ಪಕ್ಷಗಳ ಮುಖಂಡರಲ್ಲಿ ಮೂಡಿದೆ ಎನ್ನಲಾಗುತ್ತಿದೆ. 

ನಾಮಪತ್ರ ಸಲ್ಲಿಕೆಗೆ ಡಿ.2 ಅಂತಿಮ ದಿನವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಭಾನುವಾರ ನಿರ್ಧರಿಸಲಾಗಿದೆ. ಸೋಮವಾರದ ವೇಳೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. 

SCROLL FOR NEXT