ರಾಜಕೀಯ

ಉಪ ಚುನಾವಣಾ ಅಖಾಡದಲ್ಲಿ ವರಸೆ ಬದಲಾಯಿಸಿದ ಕಾಂಗ್ರೆಸ್ : ಮತ್ತೆ ಮೈತ್ರಿ ಜಪ 

Nagaraja AB

 ಬೆಂಗಳೂರು: ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಖಾಡದಲ್ಲಿ ವರಸೆ ಬದಲಾಯಿಸಿರುವ ಕಾಂಗ್ರೆಸ್  ಪಕ್ಷ ಮತ್ತೆ ಮೈತ್ರಿಯ ಮಾತುಗಳನ್ನಾಡುತ್ತಿದೆ. ಮೈತ್ರಿ ಪಕ್ಷ ಜೆಡಿಎಸ್ ನೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವುದಾಗಿ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸುತ್ತಿದ್ದಾರೆ.

ಮತ್ತೆ ಸರ್ಕಾರ ರಚಿಸುವ ನಾಯಕರ ಮಾತುಗಳಿಂದ ಕಾಂಗ್ರೆಸ್ ನಲ್ಲಿ ಆತ್ಮವಿಶ್ವಾಸ ವೃದ್ಧಿಸಿದ್ದು, ಮತದಾರರು ನಮಗೆ ಮತ ಹಾಕಿದ್ದರೂ ಮುಂದಿನ 42 ತಿಂಗಳ ಕಾಲ ಏಕೆ ಪ್ರತಿಪಕ್ಷ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊರತುಪಡಿಸಿದಂತೆ  ಹೈಕಮಾಂಡ್ ಗೆ ಹತ್ತಿರದಲ್ಲಿರುವ ಬಿಕೆ ಹರಿ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಡಾ. ಜಿ. ಪರಮೇಶ್ವರ್  ಮತ್ತಿತರ  ಹಿರಿಯ ಕಾಂಗ್ರೆಸ್ ನಾಯಕರು ಮತ್ತೆ ಮೈತ್ರಿಯ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ. 

ಮೈತ್ರಿ ಬಗ್ಗೆ ಸಿದ್ದರಾಮಯ್ಯ ಅವರ ವಿರೋಧ ಬಿಟ್ಟರೆ ಉಳಿದೆಲ್ಲಾ ನಾಯಕರು ದೇವೇಗೌಡರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜನರು ಇದೀಗ ಬದಲಾವಣೆ ಬಯಸಿದ್ದಾರೆ ಎಂಬುದು ಹೈಕಮಾಂಡ್ ಗೆ ಗೊತ್ತಿದ್ದು, ಮೈತ್ರಿ ಬಗ್ಗೆ ಒಲವು ಹೊಂದಿದೆ. ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶೇ, 70ಕ್ಕೂ ಹೆಚ್ಚು ಮತ ಪಡೆಯಲಿದೆ ಎಂಬ ವಿಶ್ಲೇಷಣಾ ಅಂಶಗಳು ಉಭಯ ಪಕ್ಷಗಳಲ್ಲೂ ಮತ್ತೆ ಸರ್ಕಾರ ರಚನೆಯ ಭರವಸೆ ಮೂಡಿಸಿದೆ. 

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

SCROLL FOR NEXT