ರಾಜಕೀಯ

ರಾಹುಲ್ ಗಾಂಧಿ ಮಾತಿಂದ ರಾಷ್ಟ್ರದ ಗೌರವ ಮಣ್ಣುಪಾಲು: 'ಅತ್ಯಾಚಾರದ ರಾಜಧಾನಿ' ಹೇಳಿಕೆಗೆ ಡಿಸಿಎಂ ಸವದಿ ಆಕ್ರೋಶ

Raghavendra Adiga

ಬೆಂಗಳೂರು: ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೇಳಿರುವುದು ತೀರಾ ಖಂಡನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಹುಲ್ ಗಾಂಧಿಯವರು ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಮುಖಂಡರಾಗಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡಬೇಕಿತ್ತು. ಇಂತಹ ಬೇಜವಾಬ್ದಾರಿಯಿಂದ ಮಾತನಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರದ ಗೌರವ ಮಣ್ಣುಪಾಲಾಗುತ್ತದೆ ಎಂಬ ಕನಿಷ್ಠ ತಿಳಿವಳಿಕೆ ಅವರಿಗೆ ಇಲ್ಲದಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.

ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಮುಂತಾದ ಸಾಮಾಜಿಕ ಪಿಡುಗುಗಳನ್ನು ಮಟ್ಟಹಾಕಲು ಎಲ್ಲಾ ಪಕ್ಷಗಳು ಸಂಘಟಿತವಾಗಿ ಹೋರಾಡುವುದು ಅಗತ್ಯವಾಗಿದೆ, ಅದನ್ನು ಬಿಟ್ಟು ಈ ರೀತಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ರೀತಿಯ ಸಮಸ್ಯೆಗಳಿದ್ದಾಗ ಪ್ರಚೋದನಕಾರಿ ಹೇಳಿಕೆ ನೀಡುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಃ ಪರಿಹಾರವಾಗುವುದಿಲ್ಲ. 

ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಹಿಂದೆ ದೆಹಲಿಯಲ್ಲಿ ಸಿಕ್ ಜನಾಂಗದ ಮೇಲೆ ಅಮಾನುಷವಾಗಿ ಹಿಂಸಾಚಾರ ನಡೆಸಿದ್ದು ಯಾರು ಎಂಬುದನ್ನು ರಾಹುಲ್ ಗಾಂಧಿಯವರು ನೆನಪಿಸಿಕೊಂಡರೆ ಹಿಂಸಾವಾದಿಗಳು ಯಾರು ಎಂಬ ಸತ್ಯ ಬಯಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

SCROLL FOR NEXT