ರಾಜಕೀಯ

ಡಿಸಿಎಂ ಸ್ಥಾನಕ್ಕಾಗಿ ಹೆಚ್ಚಿದ ಪೈಪೋಟಿ: ಕಾರಜೋಳಗೆ ಸ್ಥಾನ ಅಭಾದಿತ?

Vishwanath S

ಬಾಗಲಕೋಟೆ: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಪಾಳೆಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪೈಪೋಟಿಯೂ ಜೋರಾಗಿದೆ. ಇದರಿಂದಾಗಿ ಜಿಲ್ಲೆಗೆ ಲಭ್ಯವಾಗಿರುವ ಉಪಮುಖ್ಯಮಂತ್ರಿ ಸ್ಥಾನ ಎಷ್ಟರ ಮಟ್ಟಿಗೆ ಅಭಾದಿತ ಎನ್ನುವ ಚಿಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.

ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ಬರೆಯಲಿರುವ ಹಿನ್ನೆಲೆಯಲ್ಲಿ ನಾನಾ ರೀತಿಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಇಡೀ ರಾಜ್ಯ ಉಪಚುನಾವಣೆ ಫಲಿತಾಂಶವನ್ನು ತುದಿಗಾಲ ಮೇಲೆ ನಿಂತು ಕಾಯುತ್ತಿದೆ. ಉಪಚುನಾವಣೆ ಫಲಿತಾಂಶದ ಮೇಲೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹಣೆ ಬರಹ ನಿರ್ಧಾರವಾಗಲಿದೆ. ಮತದಾನೋತ್ತರ ಸಮೀಕ್ಷೆಗಳ ಬಗ್ಗೆ ಅನೇಕರು ಪರ.ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ನಡೆದ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶದ ಬಗ್ಗೆ ನಡೆದ ಮತದಾನೋತ್ತರ ಸಮೀಕ್ಷೆಗಳು ಸುಳ್ಳಾಗಿರುವುದರಿಂದ ಜನರಲ್ಲಿ ಸಮೀಕ್ಷೆಗಳ ಬಗ್ಗೆ ಅಷ್ಟಾಗಿ ನಂಬಿಕೆ ಉಳಿದಿಲ್ಲ. ಹಾಗಾಗಿ ಫಲಿತಾಂಶ ಹೊರ ಬಂದಾಗಲೇ ಎಲ್ಲವೂ ಸ್ಪಷ್ಟವಾಗಲಿದೆ ಎನ್ನುವ ಭಾವನೆ ವ್ಯಕ್ತ ಪಡಿಸುತ್ತಿದ್ದಾರೆ.

ಏತನ್ಮಧ್ಯೆ ಜಿಲ್ಲೆಯಲ್ಲಿ ಸರ್ಕಾರ ಮುಂದುವರಿದಲ್ಲಿ ಶಾಸಕ ನಿರಾಣಿ ಮಂತ್ರಿಯಾಗುತ್ತಾರಾ ಎನ್ನುವುದಕ್ಕಿಂತ ಹೆಚ್ಚಾಗಿ ಜಿಲ್ಲೆಗೆ ಲಭ್ಯವಾಗಿರುವ ಉಪಮುಖ್ಯಮಂತ್ರಿ ಸ್ಥಾನ ಉಳಿಯುತ್ತೋ ಹೇಗೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.
ಗೋಕಾಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ, ವಿಶ್ವನಾಥ ಆಯ್ಕೆಗೊಂಡಲ್ಲಿ ಅವರು ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಆರ್. ಅಶೋಕ, ಬಿ.ಶ್ರೀರಾಮುಲ ಕೂಡ ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ  ಬಾಗಲಕೋಟೆ ಜಿಲ್ಲೆಗೆ ಸೇರಿರುವ ಮುಧೋಳ ಮೀಸಲು ವಿಧಾನಸಭೆ ಕ್ಷೇತ್ರದ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲೆಯ ಅಥಣಿಯ ಲಕ್ಷ್ಮಣ ಸವದಿ, ಅಶ್ವಥ ನಾರಾಯಣ ಉಪಮುಖ್ಯಮಂತ್ರಿ ಆಗಿದ್ದಾರೆ. 

ಡಿಸಿಎಂಗಳಾದ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿ  ಬೆಳಗಾವಿ ವಿಭಾಗಕ್ಕೆ ಸೇರಿದವರಾಗಿದ್ದು, ಹೆಚ್ಚು ಕಡಿಮೆ ಅಕ್ಕಪಕ್ಕದ ಕ್ಷೇತ್ರದವರಾಗಿದ್ದಾರೆ. ಈಗ ಇದೇ ಭಾಗಕ್ಕೆ ಸೇರಿರುವ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿನ ನಿರೀಕ್ಷೆಯೊಂದಿಗೆ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಒಂದೇ ಭಾಗಕ್ಕೆ ಮೂವರು ಉಪಮುಖ್ಯಮಂತ್ರಿ ಹೇಗೆ ಸಾಧ್ಯ ಎನ್ನುವುದು ಜನತೆಗೆ ಯಕ್ಷಪ್ರಶ್ನೆಯಾಗಿದೆಯಾದರೂ ರಾಜಕಾರಣದಲ್ಲಿ ಏನೇಲ್ಲ ನಡೆಯುವ ಸಾಧ್ಯತೆಗಳು ಹೆಚ್ಚು. ಬಿಜೆಪಿ ಪಾಳೆಯದಲ್ಲಿ ಡಿಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ಜಿಲ್ಲೆಗೆ ಸಿಕ್ಕಿರುವ ಸ್ಥಾನ ಎಲ್ಲಿ ಕೈ ಬಿಡುತ್ತದೋ ಎನ್ನುವ ಅನುಮಾನ ಜನತೆಯಲ್ಲಿ ಬಲವಾಗುತ್ತಿದೆ. ಜತೆಗೆ ಕೊನೆಗಳಿಗೆವರೆಗೂ ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದ ಶಾಸಕ ನಿರಾಣಿ ಕೂಡ ಈ ಬಾರಿ ಶತಾಯ-ಗತಾಯ ಮಂತ್ರಿಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಯಾರ ಅದೃಷ್ಟ ಹೇಗಿದೆ ಎನ್ನುವುದನ್ನು ಸೋಮವಾರ ಹೊರ ಬೀಳಲಿರುವ ಉಪಚುನಾವಣೆ ಫಲಿತಾಂಶ ನಿರ್ಧರಿಸಲಿರುವುದರಿಂದ ಫಲಿತಾಂಶಕ್ಕಾಗಿ ಎಲ್ಲರೂ ಕಾತರದಲ್ಲಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

SCROLL FOR NEXT