ರಾಜಕೀಯ

ಸ್ಥಾಯಿ ಸಮಿತಿಗಳಿಗೆ ಚುನಾವಣೆ: ಒಳ ಹೊಂದಾಣಿಕೆಗೆ ಬೀಳಲಿದೆಯಾ ಬ್ರೇಕ್?

Lingaraj Badiger

ಬಾಗಲಕೋಟೆ: ರಾಜಕಾರಣದ ಕಣ್ಣುಮುಚ್ಚಾಲೆ ಆಟದಲ್ಲಿ ಬಹುಮತವಿದ್ದರೂ ಬಾಗಲಕೋಟೆ ಜಿಪಂ. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿದೆ. ಇದೀಗ ಜಿಪಂ.ನ ನಾನಾ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ದಿನಾಂಕ ನಿಗದಿ ಆಗಿದ್ದು, ಬದಲಾದ ಸನ್ನಿವೇಶದಲ್ಲಿ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ೩೬ ಸದಸ್ಯ ಬಲ ಹೊಂದಿದ್ದು, ಬಿಜೆಪಿ ೧೮ ಸದಸ್ಯರನ್ನು, ಕಾಂಗ್ರೆಸ್ ೧೭ ಮತ್ತು ಪಕ್ಷೇತರ ಒಬ್ಬರು ಸದಸ್ಯರಿದ್ದಾರೆ. ಜತೆಗೆ ಬಿಜೆಪಿ ಐವರು ಶಾಸಕರು, ಒಬ್ಬರು ಮೇಲ್ಮನೆ ಸದಸ್ಯರು, ಸಂಸದರನ್ನು ಹೊಂದಿದೆ. ಕಾಂಗ್ರೆಸ್ ಇಬ್ಬರು ಶಾಸಕರು, ಒಬ್ಬರು ಮೇಲ್ಮನೆ ಸದಸ್ಯರನ್ನು ಹೊಂದಿದೆ. ಆರು ತಾಪಂ ಪೈಕಿ ತಲಾ ಮೂರು ಕಾಂಗ್ರೆಸ್ ಮತ್ತು ಬಿಜೆಪಿ ವಶದಲ್ಲಿವೆ. ಸಹಜವಾಗಿಯೇ ಬಿಜೆಪಿ ಸದಸ್ಯ ಬಲ ಸಾಕಷ್ಟು ಹೆಚ್ಚಾಗಿದೆ. 

ಜಿಪಂ. ನಲ್ಲಿ ಬಿಜೆಪಿ ಬಲ ಹೆಚ್ಚಿದ್ದರೂ ಜಾತಿ ಪ್ರಾಬಲ್ಯ ಹಾಗೂ ಬಿಜೆಪಿ ಸದಸ್ಯರ ಸಹಕಾರದಿಂದಾಗಿ ಅಧ್ಯಕ್ಷ ಸ್ಥಾನ ಮಾತ್ರ ಕಾಂಗ್ರೆಸ್ ಪಾಲಾಗುತ್ತಲೇ ಇದೆ. ಸದ್ಯದ ಜಿಪಂ. ಅವಧಿಯಲ್ಲಿ ಸತತ ಎರಡು ಬಾರಿ ಅಧ್ಯಕ್ಷ ಸ್ಥಾನ ಸೇರಿದಂತೆ ಸ್ಥಾಯಿ ಸಮಿತಿಗಳ ಅಧಿಕಾರ ಕಾಂಗ್ರೆಸ್ ಪಾಲಾಗಿವೆ. ಸದ್ಯದ ಸ್ಥಿತಿ ಹಾಗಿಲ್ಲ. ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹೇಗಾದರೂ ಮಾಡಿ ಈ ಬಾರಿ ಸ್ಥಾಯಿ ಸಮಿತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ನಲ್ಲಿ ಹೇಳಿಕೊಳ್ಳವಂತಹ ಪೂರಕ ವಾತಾವರಣ ಕಾಣಿಸುತ್ತಿಲ್ಲ.

ವೀಣಾ ಕಾಶಪ್ಪನವರ ಅಧ್ಯಕ್ಷರಾಗಿ ಆಯ್ಕೆಗೊಂಡ ವೇಳೆ ಬಿಜೆಪಿ ಒಬ್ಬರು ಸದಸ್ಯರು ಸಹಕಾರ ನೀಡಿದ್ದರು. ಬಾಯಕ್ಕ ಮೇಟಿ ಅಧ್ಯಕ್ಷರಾಗುವಾಗ ನಾಲ್ವರು ಸದಸ್ಯರು ಸಹಕಾರ ನೀಡಿದ್ದರು. ಆದಾಗ್ಯೂ ಬಿಜೆಪಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಬಳಕೆ ಮಾಡಿಕೊಂಡು ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ಆರಂಭಿಸಿದೆ.

ಏತನ್ಮಧ್ಯೆ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ನಡುವೆ ಹೊಂದಾಣಿಕೆ ಏರ್ಪಟ್ಟು, ಕಾಂಗ್ರೆಸ್ ಸ್ಥಾನಗಳನ್ನು ತನ್ನ ಬಳಿ ಇಟ್ಟುಕೊಂಡು ಸಾಮಾಜಿಕ ನ್ಯಾಯ ಸಮಿತಿ, ಕೃಷಿ ಮತ್ತು ಕೈಗಾರಿಕೆ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟು ಕೊಡಲು ಮುಂದಾದಲ್ಲಿ, ಬಿಜೆಪಿ ಸದಸ್ಯರು ಅದಕ್ಕೆ ಒಪ್ಪಿಕೊಂಡು, ಮೂರು ಸಮಿತಿಗಳಲ್ಲಿ ಸದಸ್ಯತ್ವ ಪಡೆದುಕೊಳ್ಳಲು ಬಯಸಿದಲ್ಲಿ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಗಳು ಇವೆ. ಒಂದೊಮ್ಮೆ ಕಾಂಗ್ರೆಸ್ ಸದಸ್ಯರು ಹೊಂದಾಣಿಕೆಗೆ ಒಪ್ಪದೇ ಇದ್ದಲ್ಲಿ ಅನಿವಾರ್ಯವಾಗಿ ಚುನಾವಣೆ ನಡೆದಾಗ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಲಿವೆ.

ಸ್ಥಾಯಿ ಸಮಿತಿಗಳನ್ನು ಶತಾಯ ಗತಾಯ ಪಡೆದುಕೊಳ್ಳಲು ಬಿಜೆಪಿ ಉತ್ಸುಕವಾಗಿದ್ದು, ಕಾಂಗ್ರೆಸ್‌ನಲ್ಲಿ ಅಂತಹ ಯಾವುದೇ ಉತ್ಸಾಹ ಕಾಣಿಸುತ್ತಿಲ್ಲ. ಚುನಾವಣೆ ನಡೆಯಲಿ, ಬಿಡಲಿ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗುವುದಂತೂ ನಿಚ್ಚಳವಾಗಿದೆ.

ನಾನಾ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದ ಬಳಿಕ ಜಿಪಂ. ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ನಲ್ಲೇ ಉಳಿದುಕೊಂಡು ಸ್ಥಾಯಿ ಸಮಿತಿಗಳು ಬಿಜೆಪಿ ಪಾಲಾಗಲಿವೆ. ಜಿಪಂ.ನಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಅಧಿಕಾರ ಸೂತ್ರ ಹಿಡಿಯುವಲ್ಲಿ ಸಾಧ್ಯವಾಗಿರಲಿಲ್ಲ. ಈಗ ಮನಸ್ಸು ಮಾಡಿದ್ದು, ಸದಸ್ಯರಲ್ಲಿ ನಿರಾಳ ಭಾವ ಮೂಡಿದೆ.

-ವಿಠ್ಠಲ ಆರ್. ಬಲಕುಂದಿ

SCROLL FOR NEXT