ಬೆಂಗಳೂರು: ಆ್ಯಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆಗೊಳಗಾಗಿ ತೀವ್ರ ನಿಗಾ ಘಟಕದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈದ್ಯರು ಗುರುವಾರ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಿದ್ದಾರೆ.
ವಾರ್ಡ್‌ಗೆ ಸ್ಥಳಾಂತರಗೊಂಡ ಬಳಿಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರು ಭೇಟಿಯಾಗಿ ಕುಶಲೋಪಚಾರಿ ವಿಚಾರಿಸಿದರು.
ಇಂದು ಬೆಳಗ್ಗೆ ಎಐಸಿಸಿ ನಾಯಕಿ ಸೋನಿಯಾಗಾಂಧಿ ಹಾಗೂ ಅಹ್ಮದ್ ಪಟೇಲ್ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ನಾಯಕನ ಆರೋಗ್ಯ ವಿಚಾರಿಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ದೇಶಪಾಂಡೆ, ಸಿದ್ದರಾಮಯ್ಯ ಆರೋಗ್ಯವಾಗಿದ್ದು, ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ತಮ್ಮೊಂದಿಗೆ ಅವರು ಮಾತನಾಡಿದ್ದು, ಸಂಜೆ ಡಿಸ್ಚಾರ್ಜ್ ಕೂಡ ಮಾಡಬಹುದು. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ತಿಳಿಸಿದರು.
ಬಳಿಕ ರಾಜಕೀಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ಉಪಚುನಾವಣೆಯ ಸೋಲಿಗೆ ಕೇವಲ ಸಿದ್ದರಾಮಯ್ಯ ಅವರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ನೈತಿಕ ಹೊಣೆಗಾರಿಕೆಯಿಂದ ಅವರು ರಾಜೀನಾಮೆ ನೀಡಿರಬಹುದು. ಆದರೆ
ಎಲ್ಲಾ ನಾಯಕರು ಸೇರಿಯೇ ಅಭ್ಯರ್ಥಿಗಳ ಆಯ್ಕೆಮಾಡಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಸೋಲಿನ ಜವಾಬ್ದಾರಿಯನ್ನು ನಾವೆಲ್ಲಾ ಹೊತ್ತಿದ್ದೇವೆ. ಸಾಮೂಹಿಕ ಸೋಲಿದು. ಹೀಗಾಗಿ ಸಿದ್ದರಾಮಯ್ಯ ಶಾಸಕಾಂಗ ನಾಯಕನ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೆಲವು ನಾಯಕರು ಪ್ರಚಾರ ಮಾಡದೇ ಇರಬಹುದು. ಆದರೆ ನಾವೆಲ್ಲರೂ ಸಿದ್ದರಾಮಯ್ಯ ಜೊತೆಗಿದ್ದೇ ಪ್ರಚಾರ ನಡೆಸಿದ್ದೆವು. ಹೀಗಾಗಿ ಸೋಲಿಗೆ ಅವರು ಮಾತ್ರ ಕಾರಣರೆನ್ನುವುದು ತಪ್ಪು. ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬರುವುದಕ್ಕೆ ಕೇವಲ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮಾತ್ರರೇ ಕಾರಣರಲ್ಲ. ನಾವೆಲ್ಲರೂ ಸಂಘಟಿತ ನಿರ್ಧಾರದಿಂದ ಟಿಕೇಟ್ ಹಂಚಿಕೆ ಮಾಡಿದ್ದೆವು. ಹೈಕಮಾಂಡ್ ನನ್ನ ಜೊತೆಗಂತೂ ಯಾವುದೇ ಚರ್ಚೆ ಮಾಡಿಲ್ಲ. ಟಿಕೇಟ್ ಹಂಚಿಕೆ ಸಮಿತಿಯಲ್ಲಿ ತಾವು ಸಹ ಇದ್ದುದ್ದಾಗಿ ಸ್ಪಷ್ಟಪಡಿಸಿದರು.