ರಾಜಕೀಯ

ಹಾಸನ ಜಿಲ್ಲೆಗೆ ನಾನೇ ಮುಖ್ಯಮಂತ್ರಿ: ಬಿಜೆಪಿ ಶಾಸಕ ಪ್ರೀತಂಗೌಡ

Lingaraj Badiger

ಬೆಳಗಾವಿ: ಹಾಸನ ಜಿಲ್ಲೆಯ ಮಟ್ಟಿಗೆ ನಾನೇ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಅವರು ಶನಿವಾರ ಹೇಳಿದ್ದಾರೆ. 

ತಾವು ಸಚಿವ ಸ್ಥಾನದ ಆಕಾಂಕ್ಷಿನಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಏಕೆ ಕೇಳುತ್ತೀರಿ? ನನ್ನ ಹಿಂಬಡ್ತಿ ನೀಡುತ್ತೀರಾ ಎಂದು ಪ್ರಶ್ನಿಸಿದ ಅವರು, ತಾವೊಬ್ಬ ಸಂಘಟನಾತ್ಮಕ ವ್ಯಕ್ತಿ ಎಂದರು.

ಪಕ್ಷ ನನ್ನನ್ನು ಶಕ್ತಿ ತುಂಬಿ ಶಾಸಕನನ್ನಾಗಿ ಮಾಡಿದೆ. ನನಗಿನ್ನು 37 ವರ್ಷ. ಇನ್ನೂ ಮಂತ್ರಿ ಆಗುವುದಕ್ಕೆ ವಯಸ್ಸಿದೆ, ಅವಕಾಶಗಳಿವೆ ಎಂದರು. 

ನಾನು  ಯಾವುದೇ ಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ಸಂದರ್ಭ ಬಂದಾಗ ತಾನಾಗಿಯೇ ಎಲ್ಲಾ ಅಧಿಕಾರ ಒದಗಿ ಬರಲಿದೆ ಎಂದರು. 

ಉಪ ಚುನಾವಣೆಯಲ್ಲಿ ಬಿಜೆಪಿ ಹಣಬಲದಿಂದ ಗೆದ್ದಿದೆ ಎಂಬ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ  ರಾಜ್ಯದ ಶ್ರೀಮಂತ, ಬಲಾಢ್ಯ ಪಕ್ಷ ಎಂದರೆ ಅದು ಜೆಡಿಎಸ್. ಜೆಡಿಎಸ್ ಅವರಷ್ಟು ದುಡ್ಡು, ಪ್ರೀತಂ ಗೌಡಾ ಬಿಜೆಪಿ ಹತ್ತಿರ ಇದೆಯಾ? ಎಂದು ಅವರು ಪ್ರಶ್ನಿಸಿದರು. 

ಸೋತಾಗ ಒಂದು ಕಾರಣ ಹುಡುಕಬೇಕು, ರೇವಣ್ಣನವರು ಒಳ್ಳೆಯ ರಾಜಕಾರಣಿಯಾಗಿದ್ದಾರೆ. ಒಳ್ಳೆಯ ಉತ್ತರವನ್ನು ನೀಡುತ್ತಾರೆ ಎಂದು ಅವರು ಲೇವಡಿ ಮಾಡಿದರು. 

ರೇವಣ್ಣ ಅವರ ಒಳ್ಳೆಯ ಗುಣವನ್ನು ನಾನು ರಾಜಕೀಯವಾಗಿ ಅಳವಡಿಕೊಳ್ಳುತ್ತೇನೆ ಎಂದರು.

ಹಾಸನ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳ್ಳಲಿದ್ದು, ಈಗಾಗಲೇ ಈ ಭಾಗದಲ್ಲಿ ಬಿಜೆಪಿ 5 ಸ್ಥಾನ ಗೆದ್ದಿದೆ ಎಂದರು. 

2023ರ ಚುನಾವಣೆಯಲ್ಲಿ ಅದು 17 ರಿಂದ 20 ಸ್ಥಾನ ಬಿಜೆಪಿ ಗೆ ಬರಲಿದೆ ಎಂದ ಅವರು, ಇದು ಪ್ರೀತಂ ಗೌಡ ಭವಿಷ್ಯ ನುಡಿಯುತ್ತಿಲ್ಲ. ಪಕ್ಷ ಸಂಘಟನಾತ್ಮಕವಾಗಿ ಇರುವುದನ್ನು ಹೇಳುತ್ತಿದ್ದೇನೆ ಎಂದರು. 

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾದಂತೆ ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಬಲಿಷ್ಠವಾಗಲಿದೆ. ಇದು  ಕುಟುಂಬ ರಾಜಕಾರಣ, ಜಾತಿ ಆಧಾರಿತ ರಾಜಕಾರಣ ಅಥವಾ ಬಿಸಿನೆಸ್ ಮಾದರಿ ರಾಜಕಾರಣಕ್ಕೆ  ಬ್ರೇಕ್ ಎನ್ನುವುದು ಆಗ ಗೊತ್ತಾಗಲಿದೆ ಎಂದರು.

SCROLL FOR NEXT