ರಾಜಕೀಯ

ಮಂಡ್ಯ: ಜೆಡಿಎಸ್ ತೊರೆಯಲು ಇಬ್ಬರು ಶಾಸಕರ ಚಿಂತನೆ?

Nagaraja AB

ಮಂಡ್ಯ: ಜೆಡಿಎಸ್ ಭದ್ರಕೋಟೆ ಎಂದೇ ಜನಜನಿತವಾಗಿದ್ದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್ ನೀಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ.

ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಆಪರೇಷನ್ ಕಮಲದ ಮಾತುಗಳು ಕೇಳಿಬರುತ್ತಿದ್ದು, ಇಬ್ಬರು ಜೆಡಿಎಸ್  ಶಾಸಕರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ.

ಜೆಡಿಎಸ್ ವರಿಷ್ಠರ ನಡೆ ವಿರುದ್ಧ ಬೇಸತ್ತಿರುವ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ತಮ್ಮ ರಾಜಕೀಯ ಭವಿಷ್ಯದ ಕಾರಣ ಬಿಜೆಪಿಗೆ ಸೇರ್ಪಡೆಯಾಗಲು ಚಿಂತನೆ ನಡೆಸಿದ್ದು, ಬಿಜೆಪಿಯಿಂದ ಕರೆ ಬರುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

ಮೊನ್ನೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶಾಸಕ ಸುರೇಶ್ ಗೌಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಸಹ ಇದಕ್ಕೆ ಪುಷ್ಟಿ ನೀಡುವಂತಿದೆ.

ಸರ್ಕಾರ ಸುಭದ್ರವಾಗಿದ್ದರೂ ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಭದ್ರವಾಗಿ ನೆಲೆಯೂರುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದ್ದು, ಇಬ್ಬರು ಶಾಸಕರ ಮೇಲೆ ಗಾಳ ಹಾಕಿದೆ. ಈ ಬೆಳವಣಿಗೆ ಜೆಡಿಎಸ್ ಪಾಳಯದಲ್ಲೂ ಭೀತಿಗೆ ಕಾರಣವಾಗಿದೆ. 

ಈ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗದ ಸಭೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

SCROLL FOR NEXT