ರಾಜಕೀಯ

ಹಿರಿಯರನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಕಷ್ಟ, ರಾಜೀನಾಮೆ ಹಿಂಪಡೆಯಲ್ಲ: ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಲವು ಹಿರಿಯರನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟಿಸುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತಾವು ಶಾಸಕಾಂಗ ನಾಯಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. 

ಎಐಸಿಸಿ ವರಿಷ್ಠ ಮಧುಸೂಧನ್ ಮಿಸ್ತ್ರಿ ಹಾಗೂ ಭಕ್ತ ಚರಣ್ ದಾಸ್ ಅವರು ತಮ್ಮನ್ನು ತಮ್ಮ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಹಿರಿಯ ನಾಯಕರ ವಿರುದ್ಧ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ವಿಧಾನಸಭೆ ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ರಾಜೀನಾಮೆ ವಾಪಸ್ ಪಡೆಯುವುದು ಅಸಾಧ್ಯದ ಮಾತು. ನನ್ನ ಆರೋಗ್ಯ ಚನ್ನಾಗಿದೆ. ಆದರೆ ಯಾವುದೇ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದರು. 

ಪಕ್ಷದಲ್ಲಿ ಬೇರೆಯವರಿಗೂ ಅವಕಾಶ ಮಾಡಿ ಕೊಡಿ. ಬೇರೆಯವರು ಸಹ ಜವಾಬ್ದಾರಿ ಹೊರಲಿ. ಪಕ್ಷದ ಕೆಲವು ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಕಷ್ಟ. ಇಂತಹ ಸಂಕುಚಿತ ಮನಸ್ಥಿತಿಯವರನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟುವುದು ಕಷ್ಟ ಎಂದು ಮೂಲ ಕಾಂಗ್ರೆಸ್ ನವರು ಮತ್ತು ಹಿರಿಯ ನಾಯಕರ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀವು ಯಾರನ್ನಾದರೂ ಶಾಸಕಾಂಗ ನಾಯಕರನ್ನಾಗಿ ಮಾಡಿ., ಪ್ರತಿಪಕ್ಷ ನಾಯಕ ಸ್ಥಾನದ ಜವಾಬ್ದಾರಿ ನೀಡಿ. ತಮ್ಮ ಅಭ್ಯಂತರವಿಲ್ಲ. ಹೈಕಮಾಂಡ್ ಯಾರನ್ನೇ ನೇಮಿಸಿದರೂ ನನ್ನ ಬೆಂಬಲ ಇರುತ್ತದೆ. ಆದರೆ ಸದ್ಯ ರಾಜೀನಾಮೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

SCROLL FOR NEXT