ರಾಜಕೀಯ

ಕೊಪ್ಪಳ: ಲೋಕಶಾಂತಿಗಾಗಿ ಬಿಜೆಪಿ ಸಂಸದರಿಂದ ಶತ ಚಂಡಿಕಾ ಯಾಗ, ಶಾಸಕರು ಭಾಗಿ

Lingaraj Badiger

ಕೊಪ್ಪಳ: ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಕಾವು ಹಿಂಸಾಚಾರಕ್ಕೆ ತಿರುಗುತ್ತಿದೆ. ಈ  ಹಿನ್ನೆಲೆಯಲ್ಲಿ ಲೋಕಶಾಂತಿ ಹಾಗೂ ರೈತರ ಕಲ್ಯಾಣ, ಯಡಿಯೂರಪ್ಪ ಸರ್ಕಾರ ಸುರಕ್ಷಿತವಾಗಿ ಅವಧಿ ಪೂರ್ಣಗೊಳಿಸಲಿ ಎಂದು ಕೊಪ್ಪಳದ ಸಂಸದ ಸಂಗಣ್ಣ ಕರಡಿ ಶತ ಚಂಡಿಕಾ ಯಾಗ ಮಾಡಿಸಿದ್ದಾರೆ.

ಕೊಪ್ಪಳದ ಪೌರಾಣಿಕ ಪ್ರಸಿದ್ಧ ದೇವಸ್ಥಾನ ಹುಲಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಕುಟುಂಬ ಸಮೇತರಾಗಿ ಶತಚಂಡಿಕಾ ಯಾಗ ಮಾಡಿಸಿದರು.

ಪೌರತ್ವ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು ನೋವು ಸಂಭವಿಸುತ್ತಿವೆ. ಈ ಕಾರಣಕ್ಕೆ ಮತ್ತು ಲೋಕ ಕಲ್ಯಾಣಕ್ಕಾಗಿ ಮಾಡಿಸುವ ಶತಚಂಡಿಕಾ ಯಾಗವನ್ನು ಸಂಸದರು ಕುಟುಂಬ ಸಮೇತ ಮಾಡಿಸಿದರು. 
ಈ ವಿಶೇಷ ಯಾಗವನ್ನು ಶೃಂಗೇರಿಯ ಕೃಷ್ಣಮೂರ್ತಿ ಗಣಪಾಟಿ ಮತ್ತು ಉಡುಪಿಯ ಪ್ರವೀಣ್ ತಂತ್ರಿ ಅವರ ಮಾರ್ಗದರ್ಶನದಲ್ಲಿ 10ಕ್ಕೂ ಹೆಚ್ಚು ಬಡ್ಜಿಗಳು ಹೋಮ ನಡೆಸಿದರು. 

ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಹೋಮ ಮಧ್ಯಾಹ್ನ ಒಂದು ಗಂಟೆವರೆಗೆ ನಡೆದು ಪೂರ್ಣಾಹುತಿ ಸಲ್ಲಿಸುವ ಮೂಲಕ ಕೊನೆಗೊಂಡಿತು.

ಹೋಮದ ಬಳಿಕ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪ್ರಸಾದ ಸ್ವೀಕರಿಸಿದರು. ಈ ವೇಳೆ ಮಸ್ಕಿ ಅರ್ನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಶಾಸಕ ಹಾಲಪ್ಪ ಆಚಾರ್, ಬಸವನಗೌಡ ತುರ್ವಿಹಾಳ, ಸಂತೋಷ್ ಕೆಲೋಜಿ, ಅಮರೇಶ್ ಕರಡಿ, ಗವಿಸಿದ್ದಪ್ಪ ಕರಡಿ, ರಮೇಶ್ ವೈದ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ರೈತರ ಎರಡೂ ಬೆಳೆಗೆ ನೀರು ಸಿಗುವಂತಾಗಲಿ
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಾಕಷ್ಟು ಕಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ. ಹಲವು ಕಡೆ ಹಿಂಸಾಚಾರಗಳಾಗಿ ಸಾವು ನೋವು ಸಂಭವಿಸಿದ್ದು ಮತ್ತು ಲೋಕಕಲ್ಯಾಣ, ಲೋಕಶಾಂತಿ, ಯಡಿಯೂರಪ್ಪ ಸರ್ಕಾರ ನಿರ್ವಿಘ್ನವಾಗಿ ಅವಧಿಯನ್ನು ಪೂರ್ಣಗೊಳಿಸುವುದು, ಈ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ವರ್ಷಪೂರ್ತಿ ಭರ್ತಿ ಇದ್ದು, ರೈತರ ಎರಡೂ ಬೆಳೆಗೆ ನೀರು ಸಿಗುವಂತಾಗಲಿ ಎನ್ನುವ ಸದುದ್ದೇಶದಿಂದ ಈ ಶತಚಂಡಿಕಾ ಯಾಗ ಮಾಡಿಸಿದ್ದೇವೆ. 
ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
-ಬಸವರಾಜ ಕರುಗಲ್

SCROLL FOR NEXT