ಕಲಬುರಗಿ: ಪೌರತ್ವ ಕಾಯ್ದೆ ಕುರಿತು ಜನತೆಯ ದಾರಿ ತಪ್ಪಿಸುತ್ತಿರುವುದು ದುರಾದೃಷ್ಟಕರ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದ ಐವಾನ್-ಎ- ಶಾಹಿಯಲ್ಲಿ ಸುದ್ದಿಗಾರರೊಂದಿಗರ ಮಾತನಾಡಿದ ಅವರು, ಪೌರತ್ವ ಕಾಯ್ದೆ ನೆರೆ ರಾಷ್ಟ್ರಗಳಿಂದ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ.
ಆದರೆ, ಸತ್ಯ ಸಂಗತಿ ತಿಳಿದಿದ್ದರೂ, ವಿದ್ಯಾವಂತರೆನಿಸಿಕೊಂಡವರೇ ಜನತೆಯ ದಾರಿ ತಪ್ಪಿಸುತ್ತಿರುವುದು ದುರಾದೃಷ್ಟಕರ ಎಂದು ಅವರು ಕಿಡಿಕಾರಿದರು.
ಜನತೆಯನ್ನು ತಪ್ಪು ದಾರಿಗೆಳೆಯುವುದೂ ದೇಶದ್ರೋಹದ ಕೆಲಸ ಎಂದು ಅವರು ಟೀಕಿಸಿದರು
ಯಡಿಯೂರಪ್ಪ ಮೊದಲು ಅಧಿಕಾರಕ್ಕೆ ಬಂದಾಗ ಇಬ್ಬರು ರೈತರು ಬಲಿಪಡೆದರು, ಇದೀಗ ಇಬ್ಬರು ಯುವಕರನ್ನು ಬಲಿಪಡೆದಿದ್ದಾರೆ’ ಎಂಬ ಸಿದ್ಧರಾಮಯ್ಯ ಟ್ವೀಟ್‌ಗೆ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ಯಡಿಯೂರಪ್ಪ ರೈತ ಮತ್ತು ಯುವ ವಿರೋಧಿ ಎಂದು ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಆಡಳಿದ ಬಗ್ಗೆ ವಿರೋಧ ಪಕ್ಷಗಳಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಈ ರೀತಿ ಹೇಳಿರಬೇಕು’ ಎಂದರು.