ರಾಜಕೀಯ

ಸೂರ್ಯ ಗ್ರಹಣದ ನಂತರ ನಮ್ಮ ಪದಗ್ರಹಣ ಆಗಬಹುದು: ಶಾಸಕ ಆನಂದ್ ಸಿಂಗ್ ವಿಶ್ವಾಸ

Srinivasamurthy VN

ಹೊಸಪೇಟೆ: ಸೂರ್ಯ ಗ್ರಹಣದ ನಂತರ ನಮ್ಮ ಪದಗ್ರಹಣ ಆಗಬಹುದು ಎಂದು ಹೇಳುವ ಮೂಲಕ ಹೊಸಪೇಟೆ ಶಾಸಕ ಆನಂದ್ ಸಿಂಗ್ ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.

ಇಂದು ಕಂಕಣ ಸೂರ್ಯ ಗ್ರಹಣದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಆನಂದ್ ಸಿಂಗ್ ಅವರು, 'ಸೂರ್ಯ ಗ್ರಹಣದ ನಂತರ ನಮ್ಮ ಪದಗ್ರಹಣ ಆಗಬಹುದು ಎಂಬ ಆಶಾ ಭಾವನೆ ನಮ್ಮಲ್ಲಿದೆ. ಚುನಾವಣಾ ಫಲಿತಾಂಶ ಬಂದ 24ಗಂಟೆಯೊಳಗೆ ಸಚಿವ ಸ್ಥಾನ ಸಿಗುವ ಮುನ್ಸೂಚನೆಯನ್ನ ಕ್ಷೇತ್ರದ ಜನತೆಗೆ ಕೊಟ್ಟಿದ್ದೆ. ಆದರೆ ದೇಶದಲ್ಲಿ ಉದ್ಬವವಾಗಿರುವ ಪರಿಸ್ಥಿತಿಯಿಂದ ಸಂಪುಟ ವಿಸ್ತರಣೆ ಜಿಲ್ಲೆ ಘೋಷಣೆ ವಿಳಂಬವಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ನಾನು ಭರವಸೆ ಕೊಟ್ಟಿದ್ದು ಕ್ಷೇತ್ರದ ಜನತೆಯಲ್ಲಿ ಹುಮ್ಮಸ್ಸು ತುಂಬಲು ಸಚಿವ ಸ್ಥಾನ ಸಿಗುವ ಭರವಸೆ ಕೊಟ್ಟಿದ್ದೆ. ನನ್ನ ಸಚಿವ ಸ್ಥಾನದ ಕುರಿತು ಸಿ.ಎಂ ಯಡಿಯೂರಪ್ಪ ಅವರು ಹಂಪಿ ಉತ್ಸವದ ದಿನದಂದು ವಿಜಯನಗರ ಜಿಲ್ಲೆ ಘೋಷಣೆಮಾಡುವ ಸಾಧ್ಯತೆ ಇದೆ. ಜನವರಿ 10ರಂದು ವಿಜಯನಗರ ಅರಸ ಕೃಷ್ಣದೇವರಾಯ ಅವರ 500ನೇ ಪಟ್ಟಾಭಿಷೇಕ ಮಾಡಿದ್ದ ದಿನ ಅದು. ಆ ದಿನದ ಮಹತ್ವವನ್ನ ಸಿ.ಎಂ ಗಮನಕ್ಕೆ ತರುತ್ತೇನೆ. ಸಿ.ಎಂ ಒಪ್ಪಿ ವಿಜಯನಗರ ಜಿಲ್ಲೆಯನ್ನು ಅಂದು ಘೋಷಣೆಮಾಡಿದರೆ ಅದು ಇತಿಹಾಸವಾಗಿ ಉಳಿಯುತ್ತದೆ. 

ಏಕೈಕ ಹಿಂದೂ ಸಾಮ್ರಾಜ್ಯ ವಿಜಯನಗರ. ಹಾಗಾಗಿ ಇದನ್ನ ಜಿಲ್ಲೆಮಾಡಬೇಕೆನ್ನುವುದು ನಮ್ಮ ಬೇಡಿಕೆ. ಬೇರೆ ತಾಲೂಕನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆನ್ನುವ ಒತ್ತಡವನ್ನ ಇನ್ನುಳಿದ ಶಾಸಕರು ಮಾಡಿದ್ದಾರೆ. ಅದಕ್ಕೆ ನನ್ನ ವಿರೋಧವಿಲ್ಲ. ಎರಡೆರಡು ತಾಲೂಕುಗಳನ್ನ ಒಟ್ಟಿಗೆ ಸೇರಿಸಿ ಜಿಲ್ಲೆ ಮಾಡಲಿ. ಹೊಸಪೇಟೆ ವಿಜಯನಗರ ಜಿಲ್ಲೆ ಮಾಡಬೇಕೆನ್ನುವುದಕ್ಕೆ ಕಾರಣ ಏಕೈಕ ಹಿಂದೂ ಸಾಮ್ರಾಜ್ಯ ಇರುವುದು ನಮ್ಮ ಹಂಪಿಯಲ್ಲಿ ಎಂದು ಆನಂದ್ ಸಿಂಗ್ ಹೇಳಿದರು.

SCROLL FOR NEXT