ರಾಜಕೀಯ

ಬಾಗಲಕೋಟೆ: ವಾಸ್ತು ಪ್ರಕಾರ ಬದಲಾದ ಕಾಂಗ್ರೆಸ್ ಕಚೇರಿಯ ಬಾಗಿಲುಗಳು!

Lingaraj Badiger

ಬಾಗಲಕೋಟೆ: ಜಿಲ್ಲಾ ಕೇಂದ್ರಸ್ಥಾನದ ಆಯಕಟ್ಟಿನ ಸ್ಥಳದಲ್ಲಿರುವ ಭಗಿನಿ ಸಮಾಜದ ಆವರಣದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನವೀಕರಣ ನೆಪದಲ್ಲಿ ವಾಸ್ತು ಪಾಲನೆ ಆಗಿದೆ.

ಕಚೇರಿಯ ಮುಖ್ಯ ಬಾಗಿಲು ಮತ್ತು ಕಾಂಪೌಂಡ್ ಪ್ರವೇಶ ದ್ವಾರಗಳನ್ನು ಬದಲಾಯಿಸಲಾಗಿದೆ. ಬದಲಾವಣೆಗೆ ವಾಸ್ತುದೋಷ ಕಾರಣ ಎನ್ನುವ ಮಾತು ಹರಿದಾಡುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಭಗಿನಿ ಸಮಾಜದ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಆರಂಭದ ನಂತರ ಎರಡು ಸಾರ್ವತ್ರಿಕ ಚುನಾವಣೆಗಳು ನಡೆದರೂ ಕಾಂಗ್ರೆಸ್ ಗೆಲುವಿನ ನಗೆ ಬೀರಲಿಲ್ಲ. ಬದಲಿಗೆ ಬಿಜೆಪಿ ಎದುರು ಮಕಾಡೆ ಮಲುಗಿ ಬಿಟ್ಟಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಕಚೇರಿಯ ವಾಸ್ತುವೇನಾದರೂ ಸಮಸ್ಯೆ ಆಗಿರಬಹುದಾ ಎನ್ನುವ ಕಾರಣಕ್ಕಾಗಿ ಅದರ ಬಾಗಿಲುಗಳನ್ನು ಬದಲಾಯಿಸಲಾಗಿದೆ. ಹಳೆಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ.

ಮುಂದಿನ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಆಗಮಿಸುತ್ತಿವೆ. ಆ ಚುನಾವಣೆಯಲ್ಲಾದರೂ ಪಕ್ಷವನ್ನು ಗೆಲುವಿನ ದಡ ಸೇರಿಸಲು ಕಾಂಗ್ರೆಸ್ ಮುಖಂಡರು ಈ ರೀತಿಯ ವಾಸ್ತು ಬದಲಾವಣೆ ಮಾಡಿಸಿದ್ದಾರಂತೆ.

ಮೂಲಗಳ ಪ್ರಕಾರ ಹಳೆಯ ಕಾಂಪೌಂಡ್‌ನ ಪ್ರವೇಶ ಬಾಗಿಲು ಪೂರ್ವಕ್ಕೆ ಇತ್ತಾದರೂ ಅಲ್ಲಿ ಚರಂಡಿ ಚೆಂಬರ್‌ನಿಂದ ವಾಸನೆ ಬರುತ್ತಿತ್ತು. ಹಾಗಾಗಿ ಅದನ್ನು ಮುಚ್ಚಿ, ಆವರಣ ಪ್ರವೇಶವನ್ನು ಪೂರ್ವಕ್ಕೆ ಉಳಿಸಿಕೊಳ್ಳಲಾಗಿದೆ. ಹಾಗೆ ಕಚೇರಿಯ ಮುಖ್ಯ ದ್ವಾರ ಪಶ್ಚಿಮಕ್ಕೆ ಇತ್ತು. ಅದನ್ನು ತಾತ್ಕಾಲಿಕವಾಗಿ ಮುಚ್ಚಿ ಉತ್ತರಕ್ಕೆ ಹೊಸ ಬಾಗಿಲು ಕೂಡ್ರಿಸಲಾಗಿದೆ ಎಂದು ಪಕ್ಷದ ಕೆಲ ಮುಖಂಡರು ಹೇಳುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯು ಬಾಗಿಲುಗಳ ಬದಲಾವಣೆಯೊಂದಿಗೆ ನವೀಕರಣಗೊಂಡು ನಳನಳಿಸುತ್ತಿದೆ. ಹಾಗೆ ಹತ್ತು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿದ್ದ ಎಂ.ಬಿ. ಸೌದಾಗರ ಅವರನ್ನು ಬದಲಾಯಿಸಿರುವ ರಾಜ್ಯ ವರಿಷ್ಠರು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರನ್ನು ಜಿಲ್ಲಾಧ್ಯಕ್ಷ ಗಾದಿಗೆ ಕೂಡ್ರಿಸಿದೆ. 

ನವನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸ್ವಂತ ನಿವೇಶನವನ್ನು ಹೊಂದಿದೆ. ಆದರೆ ಕಟ್ಟಡ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಈ ಹಿಂದೊಮ್ಮೆ ಕಟ್ಟಡಕ್ಕೆ ಶಿಲಾನ್ಯಾಸ ನಡೆದಿತ್ತಾದರೂ ಕಟ್ಟಡ ತಲೆ ಎತ್ತದೇ ಬಾಡಿಗೆ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿನ್ನು ಹೊಂದಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿ ವಾಸ್ತು ಬದಲಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆಯಿಂದ ರಾಜಕಾರಣದ ಹಾವು ಏಣಿಯಾಟದಲ್ಲಿ ಮತ್ತೇ ಕಾಂಗ್ರೆಸ್‌ಗೆ ಅದೃಷ್ಟ ಒಲಿಯುವುದೋ ಹೇಗೆ ಎನ್ನುವುದನ್ನು ಮುಂಬರುವ ಚುನಾವಣೆಗಳು ನಿರ್ಧರಿಸಲಿವೆ.
-ವಿಠ್ಠಲ ಆರ್. ಬಲಕುಂದಿ

SCROLL FOR NEXT