ಬೆಂಗಳೂರು: ನಾನು ಪ್ರಧಾನಿ ಮೋದಿಯಂತೆ ಡೋಂಗಿ ಬಜೆಟ್ ಮಂಡಿಸುವುದಿಲ್ಲ. ಖಂಡಿತವಾಗಿಯೂ ಉತ್ತಮ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿಯವರು ಏನು ಮಾಡುತ್ತಿದ್ದಾರೆ, ಸರ್ಕಾರದ ಯಾವ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ. ಬಿಜೆಪಿಯವರು ಮೈತ್ರಿಕೂಟದ ಶಾಸಕರಿಗೆ ಕೊಡುತ್ತಿರುವ ಆಮಿಷಗಳನ್ನು ಕೇಳಿದರೆ ಭಯವಾಗುತ್ತದೆ. ಆಪರೇಷನ್ ಕಮಲಕ್ಕೆ ಬಳಸುವ ಹಣ ಬಿಜೆಪಿಗೆ ಎಲ್ಲಿಂದ ಬಂತು ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು. ಶನಿವಾರ, ಭಾನುವಾರ ಬಿಜೆಪಿಯವರು ಯಾರನ್ನು ಸಂಪರ್ಕ ಮಾಡಿ, ಏನು ಆಫರ್ ನೀಡಿದರು ಎಂಬುದು ತಮಗೆ ಗೊತ್ತಿದೆ ಎಂದರು.
ಆಪರೇಷನ್ ಕಮಲಕ್ಕೆ ತಮ್ಮ ಅಭ್ಯಂತರವಿಲ್ಲ. ಆಪರೇಷನ್ ಕಮಲ ಮಾಡಲು ಬಿಜೆಪಿಯವರಿಗೆ ಸಂಪೂರ್ಣ ಸ್ವಾತಂತ್ರವಿದೆ. ಸಂತೋಷವಾಗಿ ಆಪರೇಷನ್ ಕಮಲ ಮಾಡಿಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕುಮಾರಸ್ವಾಮಿ ಅವರಿಗೆ ಸರ್ಕಾರ ಉಳಿಸಿಕೊಂಡರೆ ಸಾಕಾಗಿದೆ ಎಂಬ ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಪ್ರಧಾನಿ ನರೇಂದ್ರ ಮೋದಿ ಅವರಂತೆ ಡೋಂಗಿ ಬಜೆಟ್ ಮಂಡಿಸುವುದಿಲ್ಲ. ರಾಜ್ಯದ ಜನತೆಗೆ ಏನು ಕೊಡಬೇಕು ಎಂಬ ಬಗ್ಗೆ ಗಮನ ಹರಿಸುತ್ತಿದ್ದು, ಇದಕ್ಕಾಗಿ 15 ದಿನಗಳಿಂದ ಸಿದ್ಧತೆ ನಡೆಸುತ್ತಿದ್ದೇನೆ ಎಂದರು.
ಉಕ್ಕು ಸೇತುವೆ ಬಗ್ಗೆ ಮಾತನಾಡಿದ ಅವರು, ತಮಗೆ ಸ್ಟೀಲ್ ಬ್ರಿಡ್ಜ್ ಬೇಕೇ ಬೇಡವೇ ಎನ್ನುವುದಕ್ಕಿಂತ ಬೆಂಗಳೂರಿನ ನಾಗರಿಕರ ಸಮಸ್ಯೆಗೆ ಪರಿಹಾರ ಒದಗಿಸುವುದು ಮುಖ್ಯ ಎಂದು ಸೂಚ್ಯವಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics