ರಾಜಕೀಯ

ಬಜೆಟ್ ಮೇಲೆ 'ಆಪರೇಷನ್ ಕಮಲ' ಕರಿನೆರಳು?: ಸಿದ್ದರಾಮಯ್ಯ, ದಿನೇಶ್ ಗುಂಡುರಾವ್ ತದ್ವಿರುದ್ಧ ಹೇಳಿಕೆ

Shilpa D
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್‍ನ ಒಟ್ಟು 18 ಶಾಸಕರು ಸೋಮವಾರ ಬಿಜೆಪಿ ಸೇರುತ್ತಾರೆ ಎನ್ನುವ  ಸುದ್ದಿಯ ಬೆನ್ನಲ್ಲೆ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸ್ಫೋಟಕ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ, ನಮ್ಮ ಶಾಸಕರಿಗೆ ಬಿಜೆಪಿಯಿಂದ 30ರಿಂದ 40 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಒಂದೆಡೆ ದಿನೇಶ್ ಗುಂಡೂರಾವ್ ಹೇಳಿದರೇ ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ಆಪರೇಷನ್ ಕಮಲ ಎಂದು ಪ್ರಶ್ನಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಿಜೆಪಿ ಹಣದ ಮೂಲವನ್ನು ಪ್ರಶ್ನಿಸಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 30ರಿಂದ 40 ಕೋಟಿ ರೂ. ಆಮಿಷ ಒಡ್ಡಲಾಗಿದೆ. 20 ಕೋಟಿ- 30 ಕೋಟಿ ಹಣದ ಆಮಿಷ ಒಡ್ಡುವ ಬಿಜೆಪಿಯವರಿಗೆ ಹಣ ಎಲ್ಲಿಂದ ಸಿಗುತ್ತದೆ. ಇದಕ್ಕೆ ಸುಮಾರು 200ರಿಂದ 300 ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ಇವರಿಗೆ ಹಣ ಎಲ್ಲಿಂದ ಬರುತ್ತದೆ. ಸೆವೆನ್ ಸ್ಟಾರ್ ಲಕ್ಷುರಿ ಹೋಟೆಲಿನಲ್ಲಿ 10 ದಿನಗಳ ಕಾಲ 100 ಜನ ಶಾಸಕರನ್ನು ಉಳಿಸಿಕೊಂಡಿದ್ದಾರಲ್ಲ. ಅದಕ್ಕೆ ಎಷ್ಟು ಕೋಟಿ ಖರ್ಚಾಗಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ.
ಬಜೆಟ್ ಅಧಿವೇಶನಕ್ಕೆ ನಮ್ಮ ಪಕ್ಷದಿಂದ ಎಲ್ಲರೂ ಭಾಗವಹಿಸುತ್ತಾರೆ. 80 ಜನನೂ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, 
ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಮಾತನಾಡಿ, ಆಪರೇಷನ್ ಕಮಲದ ವದಂತಿ ತಳ್ಳಿ ಹಾಕಿದ್ದಾರೆ, ಎಲ್ಲಿದೆ ಆಪರೇಷನ್ ಕಮಲ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಈ ತದ್ವಿರುದ್ಧ ಹೇಳಿಕೆಗಳು ಪಕ್ಷದೊಳಗೆ ಗೊಂದಲ ಮೂಡಿಸಿದೆ.
SCROLL FOR NEXT