ಗೃಹ ಕಚೇರಿಯಲ್ಲಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ
ಬೆಂಗಳೂರು: ಬ್ರದರ್, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ, ನಾಳೆನೆ ಮುಂಬಯಿಗೆ ಹೋಗಿ ಅಲ್ಲಿ ನಿಮಗೆ ಪೇಮೆಂಟ್ ಆಗುತ್ತದೆ ಎಂದು ಯಡಿಯೂರಪ್ಪ ನನಗೆ ಆಫರ್ ನೀಡಿದ್ದರು ಗುರುಮಿಟ್ ಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಮಿಟ್ ಕಲ್ ಶಾಸಕ ನಾಗನಗೌಡ ಅವರ ಪುತ್ರ, ನಿನ್ನೆ ರಾತ್ರಿ 11.30ಕ್ಕೆ ನನಗೊಂದು ಕರೆ ಬಂದಿತ್ತು, ಆ ಕಡೆಯಿಂದ ಯಡಿಯೂರಪ್ಪ ಮಾತನಾಡಿ, ತಮಗೆ ದೇವದುರ್ಗದ ಸರ್ಕ್ಯೂಟ್ ಹೌಸ್ ಗೆ ಬರಲು ಹೇಳಿದರು, ನಾನು ಅಲ್ಲಿಗೆ ತೆರಳಿದೆ, ಅಲ್ಲಿ ಹಾಸನ ಶಾಸಕ ಪ್ರೀತಂ ಗೌಡ ಮತ್ತು ಒಬ್ಬ ಪತ್ರಕರ್ತ ಇದ್ದರು ಎಂದು ಹೇಳಿದ್ದಾರೆ.
ನಿನಗೆ 25 ಕೋಟಿ ರು ಹಣ ನೀಡುತ್ತೇವೆ, ಚುನಾವಣೆಗೆ ಹಣ ಕೊಡುತ್ತೇವೆ, ನೀನು ನಾಳೆಯೇ ಮುಂಬಯಿಗೆ ಹೋಗು ಅಲ್ಲಿ ನಿನಗೆ ಎಲ್ಲವೂ ವ್ಯವಸ್ಥೆ ಆಗುತ್ತದೆ, ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದರೇ ನಿಗಮ-ಮಂಡಳಿ ಹುದ್ದೆ ನೀಡಲಾಗುವುದು, ಅದರಲ್ಲಿಯೇ ನೀವು ಹಣ ಮಾಡಿಕೊಳ್ಳಬಹುದು ಎಂದು ಯಡಿಯೂರಪ್ಪ ಹೇಳಿದ್ದಾಗಿ ಶರಣಗೌಡ ತಿಳಿಸಿದ್ದಾರೆ.
ನೀವು ದೊಡ್ಡವರು ಹೀಗೆಲ್ಲಾ ಮಾಡಬಾರದು, ನಮಗೆ ಒಳ್ಳೆಯ ಮಾರ್ಗ ತೋರಬೇಕು, ಅದನ್ನು ಬಿಟ್ಟು ಹೀಗೆ ದಾರಿ ತಪ್ಪಿಸಬಾರದು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.