ರಾಜಕೀಯ

ದೆಹಲಿ ತಲುಪಿದ ಆಡಿಯೋ ವಿವಾದ; ಆಡಿಯೋ ಲೀಕ್ ಭಾಗ-2 ರಿಲೀಸ್ ಮಾಡಿದ ಕಾಂಗ್ರೆಸ್

Srinivasamurthy VN
ನವದೆಹಲಿ: ಬಜೆಟ್ ಅಧಿವೇಶನದ ಬೆನ್ನಲ್ಲೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆಪರೇಷನ್ ಕಮಲದ ಆಡಿಯೋ ವಿವಾದ ಇದೀಗ ದೆಹಲಿ ಅಂಗಳ ತಲುಪಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮುಖಂಡರು ಆಡಿಯೋ ಲೀಕ್ ಭಾಗ-2 ರಿಲೀಸ್ ಮಾಡಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಕಮಲದ ಇಂಚಿಂಚೂ ವಿವರಗಳನ್ನು ಬಹಿರಂಗ ಮಾಡಿದ್ದಾರೆ. ಈ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು, ಈ ಇಡೀ ಪ್ರಕರಣದಿಂದಾಗಿ ಇಡೀ ದೇಶ ಆಘಾತಕ್ಕೊಳಗಾಗಿದೆ. ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಆಡಿಯೋದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರಿಗೆ ಹಣ ಆಮಿಷ ಒಡ್ಡಿ ರಾಜಿನಾಮೆಗೆ ಪ್ರಯತ್ನಿಸುತ್ತಿರುವ ಕುರಿತು ಮಾಹಿತಿ ಇದೆ. ಈ ಪ್ರಕರಣದಲ್ಲೂ ಖುದ್ಧು ಬಿಜೆಪಿ ರಾಜ್ಯಾದ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರೇ ಪಾಲ್ಗೊಂಡಿರುವುದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ವೇಣುಗೋಪಾಲ್ ಹೇಳಿದ್ದಾರೆ.
'ಯಡಿಯೂರಪ್ಪ ನಮ್ಮ ಓರ್ವ ಶಾಸಕನಿಗೆ 10 ಕೋಟಿ ರೂ ನೀಡುವುದಾಗಿ ಆಮಿಷ ಒಡ್ಡಿ ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇದೇ ರೀತಿ ಇತರೆ 18 ಶಾಸಕರನ್ನು ಸೆಳೆಯಲು ಅವರು ಯತ್ನಿಸಿದ್ದಾರೆ, ಒಬ್ಬೊಬ್ಬ ಶಾಸಕನಿಗೂ ಕೋಟಿ ಕೋಟಿ ರೂಗಳ ಆಮಿಷ ಒಡ್ಡಲಾಗುತ್ತಿದೆ. ಶಾಸಕರ ವ್ಯಾಪರಕ್ಕಾಗಿಯೇ 200 ಕೋಟಿಗೂ ಅಧಿಕ ಹಣ ವ್ಯಯಿಸಲು ಬಿಜೆಪಿ ಮುಂದಾಗಿದೆ. ಅಲ್ಲದೆ ತಮ್ಮ ಪಕ್ಷ ಸೇರಿದ ಶಾಸಕರಿಗೆ ಸಚಿವ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ನೀಡುವ ಆಮಿಷ ನೀಡಲಾಗಿದೆ.
ನಮ್ಮ ಶಾಸಕ ಪಕ್ಷಾಂತರ ವಿರೋಧಿ ಕಾಯ್ದೆ ಕುರಿತು ಕೇಳಿದಾಗ ಸ್ಪೀಕರ್ ಗೇ 50 ಕೋಟಿ ರೂ ನೀಡಿ ಸೆಟ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ದೆಹಲಿಯಲ್ಲಿ ನ್ಯಾಯಾಧೀಶರನ್ನು ಅಮಿತ್ ಶಾ ಸೆಟ್ ಮಾಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ ಎಂದರೆ ದೇಶದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ಆಡಿಯೋದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತ್ರವಲ್ಲದೇ ಪ್ರಧಾನಿ ಮೋದಿ ಅವರ ಹೆಸರೂ ಕೂಡ ಪ್ರಸ್ತಾಪವಾಗಿದೆ. ಹೀಗಾಗಿ ಈ ಪ್ರಕರಣ ಗಂಭೀರವಾಗಿದ್ದು, ಸಂಪೂರ್ಣ ತನಿಖೆಯಾಗಬೇಕು ಎಂದು ವೇಣುಗೋಪಾಲ್ ಹೇಳಿದರು. 
ಅಂತೆಯೇ ಇಂದೂ ಕೂಡ ಕೆಲ ಆಡಿಯೋ ಕ್ಲಿಪಿಂಗ್ಸ್ ಗಳನ್ನು ಬಿಡುಗಡೆ ಮಾಡಲಾಯಿತು.
SCROLL FOR NEXT